ಮೋದಿ ಆಕರ್ಷಕ ಭಾಷಣಕ್ಕೆ ವಿಷಯ ಒದಗಿಸುವವರ್ಯಾರು? 'ನಮೋ' ಹಿಂದೆ ಕೆಲಸ ಮಾಡುತ್ತೆ ಈ ತಂಡ!

First Published 7, Feb 2018, 12:26 PM IST
Team Behind PM Narendra Modi
Highlights

ಬೆಂಗಳೂರಿಗೆ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಬಳಸಿದ ‘ಟಾಪ್’ ಶಬ್ದ ಬಳಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಪ್ರಧಾನಮಂತ್ರಿ ಭಾಷಣಕ್ಕೆ ವಿಷಯಗಳನ್ನು ಒದಗಿಸುವವರಾರು ಎಂಬ ಕುತೂಹಲವೂ ಹೆಚ್ಚಾಗಿತ್ತು. ಈ ಕುತೂಹಲ ತಣಿಸುವ ವರದಿ ಇಲ್ಲಿದೆ.

ಬೆಂಗಳೂರು (ಫೆ.07): ಬೆಂಗಳೂರಿಗೆ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಬಳಸಿದ ‘ಟಾಪ್’ ಶಬ್ದ ಬಳಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಪ್ರಧಾನಮಂತ್ರಿ ಭಾಷಣಕ್ಕೆ ವಿಷಯಗಳನ್ನು ಒದಗಿಸುವವರಾರು ಎಂಬ ಕುತೂಹಲವೂ ಹೆಚ್ಚಾಗಿತ್ತು. ಈ ಕುತೂಹಲ ತಣಿಸುವ ವರದಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯ ಸಾರ್ವಜನಿಕ ಸಭೆಗಳಲ್ಲಿ ಹೊಸ ಶಬ್ದಗಳ ಬಳಕೆಯಾಗುತ್ತದೆ. ಪ್ರತಿಪಕ್ಷಗಳನ್ನು ಟೀಕಿಸಲು ತಮ್ಮದೇ ಶೈಲಿಯಲ್ಲಿ ದಾಳಿ ನಡೆಸುತ್ತಾರೆ. ಒಮ್ಮೆ ಎಬಿಸಿಡಿ ಮೂಲಕ ತರಾಟೆಗೆ ತೆಗೆದುಕೊಂಡರೆ, ಇನ್ನೊಮ್ಮೆ ಸ್ಕ್ಯಾಮ್​ ಎನ್ನುವ ಶಬ್ದಕ್ಕೂ ರಾಜಕೀಯ ಪಕ್ಷಗಳ ನಂಟು ನೀಡುತ್ತಾರೆ. ಇನ್ನೊಮ್ಮೆ ಜಿಎಸ್​ಟಿಗೆ ಜನಸಾಮಾನ್ಯರ ತೆರಿಗೆಯ ಸ್ವರೂಪ ನೀಡಿದರೆ, ಭಿಮ್ ಆಪ್​ಗೆ ಅಂಬೇಡ್ಕರ್​ನ್ನು ಬೆಸೆಯುತ್ತಾರೆ.

ಯಾರ್ಯಾರಿದ್ದಾರೆ ಮೋದಿ ಟೀಂನಲ್ಲಿ?

ಆದರೆ ಇಂತಹ ವಿನೂತನ ಶಬ್ದಗಳ ಬಳಕೆಯ ಹಿಂದೆ ವ್ಯವಸ್ಥಿತ ತಂಡದ ಅಧ್ಯಯನ ಹಾಗೂ ಶ್ರಮವಿದೆ. ಮೋದಿಯ ಶಬ್ದಗಳ ಮೋಡಿಯ ಹಿಂದೆ ಪಂಚ ಸದಸ್ಯರ ತಂಡವಿದೆ. ಮೋದಿ ಭಾಷಣಕ್ಕೆ ಮಾಹಿತಿ ನೀಡುವುದರ ಜತೆಗೆ, ಆಕರ್ಷಕವನ್ನಾಗಿಸುವ ಕಲೆಯನ್ನು ಈ ತಂಡ ಕರಗತ ಮಾಡಿಕೊಂಡಿದೆ. ಗುಜರಾತ್​ನಲ್ಲಿ ಮುಖ್ಯಮಂತ್ರಿಯಾಗಿರುವ ದಿನದಿಂದಲೂ ಮೋದಿ ಜತೆ ಈ ತಂಡದಲ್ಲಿನ ಬಹುತೇಕ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ‘ಟಾಪ್’(ಟೊಮ್ಯಾಟೋ, ಆನಿಯನ್, ಪೊಟಾಟೋ) ಶಬ್ದ ಬಳಕೆಯ ಬಳಿಕ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ತಂಡದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಜಗದೀಶ್ ಠಕ್ಕರ್, ಸಂಶೋಧನಾ ಅಧಿಕಾರಿಗಳಾದ ಯಶ್ ಗಾಂಧಿ, ನೀರವ್ ಷಾ, ವಿಶೇಷ ಕರ್ತವ್ಯ ಅಧಿಕಾರಿ ಹಿರೇನ್ ಜೋಶಿ, ಹಾಗೂ ಪ್ರತೀಕ್ ದೋಶಿ ಇದ್ದಾರೆ. ಈ ಐವರ ತಂಡವು ನರೇಂದ್ರ ಮೋದಿಯ ಭಾಷಣಕ್ಕೆ ಮಾಹಿತಿ ಸರದಾರರಾಗಿದ್ದಾರೆ. ಒಬ್ಬರು ದೈನಂದಿನ ಆಗುಹೋಗುಗಳ ಬಗ್ಗೆ ಸಂಪೂರ್ಣ ಗಮನ ನೀಡಿದರೆ, ಇನ್ನಿಬ್ಬರು ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿರುತ್ತಾರೆ. ಇನ್ನೋರ್ವ ಅಧಿಕಾರಿಯು ಸಾಮಾನ್ಯ ಜನರ ಭಾವನೆಗಳ ಬಗ್ಗೆ ಮಾಹಿತಿ ಕ್ರೋಡೀಕರಣದಲ್ಲಿ ತೊಡಗಿರುತ್ತಾರೆ. ಮತ್ತೊಬ್ಬ ಅಧಿಕಾರಿಯು ಆಡಳಿತಾತ್ಮಕ ಹಾಗೂ ಸರ್ಕಾರಿ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಿ ಮೋದಿ ಭಾಷಣವನ್ನು ಇನ್ನಷ್ಟು ಆಕರ್ಷಕಗೊಳಿಸುತ್ತಾರೆ. ಇದೇ ಕಾರಣದಿಂದ ಮೋದಿಯ ಪ್ರತಿ ಭಾಷಣಗಳಲ್ಲಿಯೂ ಹೊಸತನದ ಜತೆಗೆ ತಾಜಾತನ ಕಾಣಿಸುತ್ತದೆ. ಯಾರೋ ಒಬ್ಬ ಸಾಮಾನ್ಯನ ಟ್ವೀಟ್ ಕೂಡ ಭಾಷಣದಲ್ಲಿ ಉಲ್ಲೇಖವಾಗುತ್ತದೆ.

 ಸಾರ್ವಜನಿಕ ಭಾಷಣಕ್ಕೂ ಟೆಲಿಪ್ರಾಮ್ಟರ್

ಅಂತಾರಾಷ್ಟ್ರೀಯ ಅಥವಾ ಹಿಂದಿಯೇತರ ವೇದಿಕೆಗಳಲ್ಲಿ ಟೆಲಿಪ್ರಾಮ್ಟರ್ ಬಳಸಿ ಮೋದಿ ಇಂಗ್ಲಿಷ್​ನಲ್ಲಿ ಮೋದಿ ಭಾಷಣ ಮಾಡುತ್ತಿದ್ದರು. ಭಾರತದಲ್ಲಿ ಯಾವುದೇ ವೇದಿಕೆಯಲ್ಲಿ ಮಾತನಾಡುವಾಗಲೂ ಭಾಷಣದ ಚೀಟಿಗಳನ್ನಷ್ಟೆ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಸಾರ್ವಜನಿಕ ಸಭೆಗಳಲ್ಲಿ ಹಿಂದಿಯಲ್ಲಿ ಭಾಷಣ ಮಾಡುವಾಗಲು ಕೂಡ ಟೆಲಿಪ್ರಾಮ್ಟರ್ ಬಳಸಲು ಆರಂಭಿಸಿದ್ದಾರೆ. ಕೈನಲ್ಲಿ ಚೀಟಿ ಹಿಡಿದುಕೊಂಡು ಸಾರ್ವಜನಿಕ ವೇದಿಕೆಯಲ್ಲಿ ಜನಸಾಮಾನ್ಯರ ಜತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಕಷ್ಟವಾಗುತ್ತದೆ, ಇದರಿಂದ ಜನ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಈ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿಯು ಕನ್ನಡದಲ್ಲಿನ ನಾಲ್ಕೈದು ಸಾಲುಗಳನ್ನು ಅಷ್ಟೊಂದು ಸುಲಭವಾಗಿ ಹೇಳಲು ಕಾರಣವಾಗಿದ್ದು ಕೂಡ ಇದೇ ತಂತ್ರಗಾರಿಕೆ.

ಅಧಿಕಾರಿಗಳ ಪರಿಚಯ

ಜಗದೀಶ್ ಠಕ್ಕರ್: ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗಿಂದಲೂ ಇವರು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯ ನಂಬಿಕಸ್ತ ಹಾಗೂ ಹತ್ತಿರದ ವ್ಯಕ್ತಿ ಎಂದು ಹೇಳುತ್ತಾರೆ.

ಯಶ್ ಗಾಂಧಿ ಹಾಗೂ ನೀರ್ ಷಾ: ಮೂಲತಃ ಗುಜರಾತಿಗಳಾಗಿರುವ ಇವರು, ಪ್ರಧಾನಿ ಕಾರ್ಯಾಲಯದ ಸಂಶೋಧನಾ ತಂಡದ ಅಧಿಕಾರಿಗಳಾಗಿದ್ದಾರೆ. ಪ್ರಧಾನಿಯ ಸಾಮಾಜಿಕ ಜಾಲತಾಣಗಳನ್ನು ನೋಡಿಕೊಳ್ಳುವುದರ ಜತೆಗೆ ಮೋದಿ ಭಾಷಣಕ್ಕೆ ಅಗತ್ಯವಿರುವ ಸಂಶೋಧನೆಯನ್ನು ಮಾಡುತ್ತಾರೆ.

ಹಿರೇನ್ ಜೋಶಿ: ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಜೋಶಿ, ಮೊದಲು ಪತ್ರಕರ್ತರಾಗಿದ್ದರು. ಜನಸಾಮಾನ್ಯರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಇವರು ಪ್ರಧಾನಿಗೆ ಮಾಹಿತಿ ನೀಡುತ್ತಾರೆ.

ಪ್ರತೀಕ್ ದೋಶಿ: ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಓದಿರುವ ಇವರು, 2007ರಿಂದ ಮೋದಿ ಜತೆಗಿದ್ದಾರೆ. ಮೋದಿ ಸರ್ಕಾರದ ಆಡಳಿತಾತ್ಮಕ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರ ಜತೆಗೆ ಭಾಷಣಕ್ಕಾಗಿ ವಿಶೇಷ ಅಧ್ಯಯನ ಹಾಗೂ ಸಂಶೋಧನೆ ಮಾಡುತ್ತಿರುತ್ತಾರೆ.

ಈ ತಂಡ ಹುಟ್ಟುಹಾಕಿದ ಆಕರ್ಷಕ ಶಬ್ದಗಳು

ಜಿಎಸ್​ಟಿ: ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್, ಗ್ರೋಯಿಂಗ್ ಸ್ಟ್ರಾಂಗರ್ ಟುಗೆದರ್(ಗಬ್ಬರ್ ಸಿಂಗ್ ಟ್ಯಾಕ್ಸ್​ಗೆ ಪ್ರತಿಯಾಗಿ)

ಸ್ಕ್ಯಾಮ್​: ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಯಾದವ್, ಮಾಯಾವತಿ(ಉತ್ತರ ಪ್ರದೇಶದಲ್ಲಿನ ಭ್ರಷ್ಟಾಚಾರ, ಹಗರಣಗಳ ಕುರಿತು ಚುನಾವಣೆ ಪ್ರಚಾರದಲ್ಲಿ)

ಭೀಮ್: ಭಾರತ್ ಇಂಟರ್ಫೆಸ್ ಫಾರ್ ಮನಿ(ಅಂಬೇಡ್ಕರ್ ಅವರನ್ನು ಪರೋಕ್ಷವಾಗಿ ನೆನೆಸಿಕೊಂಡು ಮೊಬೈಲ್ ಆಪ್​ಗೆ ನಾಮಕರಣ)

ವಿಕಾಸ್: ವಿದ್ಯುತ್, ಕಾನೂನು ಮತ್ತು ಸಡಕ್(ರಸ್ತೆ), (ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷದ ಪರವಾದ ಪ್ರಚಾರದಲ್ಲಿ ನೀಡಿದ ಹೇಳಿಕೆ)

ಎಬಿಸಿಡಿ: ಆದರ್ಶ, ಬೋಫೋರ್ಸ್, ಕೋಯಲಾ ಮತ್ತು ದಾಮಾದ್(ಕಾಂಗ್ರೆಸ್​ನ ಸರಣಿ ಹಗರಣಗಳ ಬಗ್ಗೆ ಪ್ರಸ್ತಾಪಿಸಿ)

 

loader