ಬೆಂಗಳೂರು (ಸೆ. 04): ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್‌ ಬುಧವಾರದಿಂದಲೇ (ಸೆ.4) ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರವೇ ನಡೆಯಲಿದ್ದು, ಈ ತಿಂಗಳೊಳಗೆ ಸಂಪೂರ್ಣವಾಗಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಭರವಸೆ ನೀಡಿದ್ದಾರೆ.

ಮಂಗಳವಾರ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2007’ಕ್ಕೆ ಕಳೆದ 2017ರಲ್ಲಿ ಮಾಡಿದ ತಿದ್ದುಪಡಿಯಂತೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಹೇಳಿದರು.

ಈಗಾಗಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಹೆಚ್ಚುವರಿ, ಪರಸ್ಪರ ಮತ್ತು ಕೋರಿಕೆ ವರ್ಗಾವಣೆಯಲ್ಲಿ 16,066 ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಉಳಿದ ಕಡ್ಡಾಯ ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸಲ್ಲಿಕೆಯಾಗಿದ್ದ 12,622 ಅರ್ಜಿಗಳ ಪೈಕಿ 5,540 ಶಿಕ್ಷಕರು ವರ್ಗಾವಣೆಗೆ ಅರ್ಹತೆ ಹೊಂದಿದ್ದರು.

ಈ ಪೈಕಿ ಶೇ.4 ರಷ್ಟುಕಡ್ಡಾಯ ವರ್ಗಾವಣೆಗೆ 4,084 ಶಿಕ್ಷಕರು ಮಾತ್ರ ಮಿತಿಯೊಳಗೆ ಬರಲಿದ್ದಾರೆ. ಇದರಲ್ಲಿ ‘ಎ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 713 ಶಿಕ್ಷಕರಿಗೆ ‘ಬಿ’ ಮತ್ತು ‘ಸಿ’ ವಲಯದಲ್ಲಿ ವಿಷಯವಾರು ಹುದ್ದೆ ಖಾಲಿ ಇಲ್ಲ ಎಂದರು.

ಅದೇ ರೀತಿ ಪ್ರೌಢಶಾಲೆಯಲ್ಲಿ ಸಲ್ಲಿಕೆಯಾಗಿದ್ದ 3,692 ಅರ್ಜಿಗಳ ಪೈಕಿ 1,592 ಅರ್ಜಿಗಳು ಅರ್ಹತೆ ಹೊಂದಿವೆ. ಶೇ.4ರ ಮಿತಿಯಲ್ಲಿ 1,234 ಮಾತ್ರ ವರ್ಗಾವಣೆ ಮಾಡಬೇಕಿದೆ. ಇದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ 345 ಶಿಕ್ಷಕರಿಗೆ ಹುದ್ದೆಗಳು ಖಾಲಿ ಇಲ್ಲ. ಹೀಗಾಗಿ, ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ಒಟ್ಟಾರೆ 1,058 ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದ್ದು, ಉಳಿದ 4,260 ಶಿಕ್ಷಕರಿಗೆ ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಯಮಗಳ ಪ್ರಕಾರವೇ ಶಿಕ್ಷಕರು ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಾಥಮಿಕ ಶಿಕ್ಷಕರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಲಯ ವ್ಯಾಪ್ತಿಯಲ್ಲಿಯೇ ಸ್ಥಳ ನೀಡಲು ಪ್ರಯತ್ನಿಸಲಾಗುತ್ತದೆ. ಸಮೀಪದ ಸ್ಥಳ ದೊರೆಯದ ಕೆಲವೇ ಕೆಲವು ಶಿಕ್ಷಕರು ದೂರದ ಸ್ಥಳಗಳಿಗೆ ವರ್ಗಾವಣೆಯಾಗಬೇಕಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕರ ಸ್ನೇಹಿ ವರ್ಗಾವಣೆಗೆ ತಿದ್ದುಪಡಿ:

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2007ಕ್ಕೆ 2017ರಲ್ಲಿ ತಿದ್ದುಪಡಿ ಮಾಡಿರುವುದರಿಂದ ಕಡ್ಡಾಯ ವರ್ಗಾವಣೆ ಮಾಡಲಾಗಿದೆ. ಇದು ಎರಡೂ ಸದನಗಳಲ್ಲಿ ಚರ್ಚೆಯಾಗಿಯೇ ಅನುಷ್ಠಾನ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯರ ಚರ್ಚೆ ಬಳಿಕವೇ ಜಾರಿಗೊಂಡಿದೆ. ಹೀಗಿದ್ದರೂ ವಾಸ್ತವವಾಗಿ ಹತ್ತಾರು ರೀತಿಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ‘ಶಿಕ್ಷಕರ ಸ್ನೇಹಿ’ ವರ್ಗಾವಣೆ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಕೇವಲ ಕಡ್ಡಾಯ ವರ್ಗಾವಣೆ ಮಾತ್ರವಲ್ಲ, ಪತಿ/ಪತ್ನಿ ಪ್ರಕರಣ, ಹೆಚ್ಚುವರಿ ಶಿಕ್ಷಕರು, ಅಂತರ್‌ ವಲಯ ವರ್ಗಾವಣೆ ಸೇರಿದಂತೆ ಎಲ್ಲಾ ರೀತಿಯ ವರ್ಗಾವಣೆಯಲ್ಲಿ ಶಿಕ್ಷಕರಿಗೆ ಮಾರಕವಾಗಿರುವ ನಿಯಮಗಳಿವೆ. ಇವುಗಳನ್ನು ಮುಂದಿನ ಮಾಚ್‌ರ್‍ ತಿಂಗಳೊಳಗೆ ತಿದ್ದುಪಡಿ ಮಾಡಿ 2019-20ನೇ ಸಾಲಿನಲ್ಲಿ ಹೊಸ ನಿಯಮಗಳ ಪ್ರಕಾರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ಕಡ್ಡಾಯ ವರ್ಗಾವಣೆ ಸರ್ಕಾರ ಕೈಬಿಡುತ್ತಾ?

ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಪದೇ ಪದೇ ಅಡೆ ತಡೆಯೊಡ್ಡುತ್ತಿದ್ದ ಹಾಗೂ ಮುಂದೂಡಿಕೆಗೆ ಕಾರಣವಾಗಿರುವ ‘ಕಡ್ಡಾಯ ವರ್ಗಾವಣೆ’ಯನ್ನು ಸರ್ಕಾರ ಕೈಬಿಡುವ ಸಾಧ್ಯತೆಗಳಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ದಶಕಗಳಿಂದ ಬೀಡುಬಿಟ್ಟಿರುವ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನೆಲೆಯೂರಿರುವ ಶಿಕ್ಷಕರು ಹಳ್ಳಿಗಳಲ್ಲಿ ಪಾಠ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಅಲ್ಲದೆ, ಕೆಲವು ವಿಧಾನ ಪರಿಷತ್‌ ಸದಸ್ಯರ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಹಿಂದಿನ ಶಿಕ್ಷಣ ಸಚಿವರೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಈ ಲಾಬಿಗೆ ಮಣಿದು ‘ಕಡ್ಡಾಯ ವರ್ಗಾವಣೆ’ ಕೈಬಿಡಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿ ಮಾಡದೆ ದೃಢ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೂ ಅನುಕೂಲವಾಗುವ ರೀತಿಯಲ್ಲಿ ವರ್ಗಾವಣೆ ಮಾಡಲಾಗುತ್ತದೆ.

ವರ್ಗಾವಣೆ ಪ್ರಕ್ರಿಯೆಗೆ ಇಡಲಾಗಿರುವ ‘ಕಡ್ಡಾಯ ವರ್ಗಾವಣೆ’ ಎಂಬ ಪದವೇ ತೀವ್ರ ಗಾಬರಿಗೊಳಿಸುವಂತೆ ಕಾಣುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ‘ಕಡ್ಡಾಯ ವರ್ಗಾವಣೆ’ ಎಂಬ ಪದವನ್ನೇ ಬದಲಾಯಿಸಲು ಕ್ರಮ ವಹಿಸಲಾಗುವುದು. ಮುಂದಿನ ಅಧಿವೇಶನದಲ್ಲಿ ನಿಯಮಗಳನ್ನು ರೂಪಿಸಿ ವರ್ಗಾವಣೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.