ಬೆಂಗಳೂರು [ಸೆ.04]:   ಶಿಕ್ಷಕರ ವರ್ಗಾವಣೆಯನ್ನು ಆರಂಭಿಸುವಂತೆ ಮತ್ತು ಕಡ್ಡಾಯ ವರ್ಗಾವಣೆ ಸ್ಥಗಿತಗೊಳಿಸುವಂತೆ ಕೋರಿ ಶಿಕ್ಷಕರು ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಬಸವೇಶ್ವರ ನಗರದಲ್ಲಿರುವ ಸಚಿವರ ನಿವಾಸ ಹಾಗೂ ಸರ್ವ ಶಿಕ್ಷಣ ಅಭಿಯಾನ ಕಚೇರಿ ಎರಡೂ ಕಡೆ ಭೇಟಿ ನೀಡಿದ್ದ ಶಿಕ್ಷಕರು, ಸಚಿವರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. 

ಇದಾದ ಬಳಿಕ ಸಂಜೆ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸಚಿವರು ಈ ಬಾರಿ ಕಡ್ಡಾಯ ವರ್ಗಾವಣೆ ಮಾಡುವುದಾಗಿ ತಿಳಿಸಿದರು. 

ಸಚಿವರ ಹೇಳಿಕೆ ಬೆನ್ನಲ್ಲೇ ಕೆಲವು ಶಿಕ್ಷಕರು ಹೈಡ್ರಾಮಾ ಮಾಡಿದರು. ನಾವು ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದೇವೆ. ಮತ್ತೆ ಕಡ್ಡಾಯ ವರ್ಗಾವಣೆ ಅಡಿ ಗ್ರಾಮೀಣ ಪ್ರದೇಶಗಳಿಗೆ ಕಳುಹಿಸುತ್ತಿರುವುದು ಸರಿಯಲ್ಲ. ಕೂಡಲೇ ಕಡ್ಡಾಯ ವರ್ಗಾವಣೆ ಕೈಬಿಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.