ಪ್ರತಿ ಟ್ಯಾಕ್ಸಿಯಲ್ಲಿ ಆರು ಜನ ಪ್ರಯಾಣಿಕರು ಸಂಚರಿಸಬಹುದು. ಒಮ್ಮೆ ಪೋಡ್ ಕಾರು ಹತ್ತಿದ ಬಳಿಕ ತಾವು ತಲುಪಬೇಕಾದ ಅಥವಾ ಇಳಿಯಬೇಕಾದ ಸ್ಥಳಕ್ಕೆ ನೀಡಲಾಗಿರುವ ಕೋಡ್‌'ಅನ್ನು ಒತ್ತಿದರೆ ಆ ಸ್ಥಳದಲ್ಲಿ ಟ್ಯಾಕ್ಸಿ ನಿಂತು ಬಾಗಿಲು ತೆರೆಯುತ್ತದೆ. ಈ ಟ್ಯಾಕ್ಸಿಯಲ್ಲಿ ಸಂಚರಿಸಲು ಟಿಕೆಟ್ ದರ ಇನ್ನೂ ಅಂತಿಮವಾಗಿಲ್ಲ.
ಕನ್ನಡಪ್ರಭ ವಿಶೇಷ ವರದಿ
ಬೆಂಗಳೂರು(ನ.18): ಕಚೇರಿಯಿಂದ ಮನೆ ಹತ್ತಿರದವರೆಗೂ ಟ್ರಾಫಿಕ್'ಜಾಮ್, ಧೂಳು ಮತ್ತಿತರ ಕಿರಿಕಿರಿ ಇಲ್ಲದೆ ಸಂಚರಿಸಲು ಮೆಟ್ರೋ ರೈಲು ಬಂದಾಯ್ತು, ಆದರೀಗ ಮೆಟ್ರೋ ನಿಲ್ದಾಣದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಮನೆ ತಲುಪೋದೇ ದೊಡ್ಡ ಸಾಹಸ. ಈ ಸಂದರ್ಭದಲ್ಲಿ ಎದುರಾಗುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಯಾವಾಗ ಸಿಗುತ್ತೆ?. ಹೀಗಂತ ಯೋಚಿಸುತ್ತಿದ್ದೀರಾ?. ಹಾಗಿದ್ದರೆ, ಚಿಂತೆ ಬೇಡ. ನಿಮ್ಮ ಆ ಸಮಸ್ಯೆಗೂ ಪರಿಹಾರ ಕಾಲಹತ್ತಿರವಾಗುತ್ತಿದೆ. ನಗರದಲ್ಲಿ ಈಗ ‘ಪೋಡ್ ಟ್ಯಾಕ್ಸಿ’ ಸೇವೆ ಆರಂಭವಾಗುವ ಸಮಯ ಸಮೀಪಿಸುತ್ತಿದೆ.
ಬಿಬಿಎಂಪಿ 2019ರ ವೇಳೆಗೆ ನಗರದಲ್ಲಿ ‘ಪೋಡ್ ಕಾರ್’ ಅಥವಾ ‘ಪೋಡ್ ಟ್ಯಾಕ್ಸಿ’ ಪರಿಚಯಿಸಲು ಮುಂದಾಗಿದೆ. ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ಸುತ್ತಮುತ್ತಲ ಪ್ರದೇಶಗಳಿಗೆ ಫೀಡರ್ ಮಾದರಿಯಲ್ಲಿ ಈ ಪೋಡ್ ಟ್ಯಾಕ್ಸಿ ಲಭ್ಯವಾಗಲಿದೆ. ರಸ್ತೆ ಮಧ್ಯೆ, ಪೋಲ್'ಗಳನ್ನು ಅಳವಡಿಸಿ ಅದರ ಮೂಲಕ ಕಾರುಗಳನ್ನು ಚಲಾಯಿಸಲಾಗುತ್ತದೆ. ಮೊದಲ
ಹಂತದಲ್ಲಿ ಎಂ.ಜಿ. ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ವೈಟ್'ಫೀಲ್ಡ್ ವರೆಗಿನ ವಿವಿಧ ಪ್ರದೇಶಗಳಲ್ಲಿ ಸುಮಾರು 70 ಕಿ.ಮೀ.ನಷ್ಟು ದೂರದ ಸಂಚಾರ ಮಾರ್ಗ ವಿನ್ಯಾಸ ಸಿದ್ಧಪಡಿಸಲಾಗಿದೆ. ಅಗರ, ದೊಮ್ಮಲೂರು, ಬಿಇಎಂಎಲ್, ಎಚ್'ಎಎಲ್ ಏರ್'ಪೋರ್ಟ್, ಮಾರತ್ತಹಳ್ಳಿ ಸೇರಿದಂತೆ ಪ್ರಮುಖವಾಗಿ 12 ಪೋಡ್ ಟ್ಯಾಕ್ಸಿ ನಿಲ್ದಾಣಗಳು ಈ ವ್ಯಾಪ್ತಿಯಲ್ಲಿ
ಬರಲಿವೆ.
ಸಾರ್ವಜನಿಕರು ಮೆಟ್ರೋ ನಿಲ್ದಾಣದಿಂದ ನೇರವಾಗಿ ತಮ್ಮ ಬಡಾವಣೆ ಅಥವಾ ಮನೆಯ ಬಳಿ ಈ ಪೋಡ್ ಕಾರುಗಳಲ್ಲಿ ಹೋಗಿ ಇಳಿಯಬಹುದು. ಪ್ರತಿ ಟ್ಯಾಕ್ಸಿಯಲ್ಲಿ 6 ಜನ: ಮೊದಲ ಹಂತದ 70 ಕಿ. ಮೀ. ಉದ್ದದ ಪೋಡ್ ಟ್ಯಾಕ್ಸಿ ಸಂಚಾರ ಮಾರ್ಗ ವಿನ್ಯಾಸದಲ್ಲಿ 2100 ಪೋಡ್ ಟ್ಯಾಕ್ಸಿಗಳು ಸಂಚರಿಸಲಿವೆ. ಪ್ರತಿ ಕಿ.ಮೀ. 30 ಟ್ಯಾಕ್ಸಿಗಳು ಇರಲಿವೆ. ಪ್ರತಿ ಟ್ಯಾಕ್ಸಿಯಲ್ಲಿ ಆರು ಜನ ಪ್ರಯಾಣಿಕರು ಸಂಚರಿಸಬಹುದು. ಒಮ್ಮೆ ಪೋಡ್ ಕಾರು ಹತ್ತಿದ ಬಳಿಕ ತಾವು ತಲುಪಬೇಕಾದ ಅಥವಾ ಇಳಿಯಬೇಕಾದ ಸ್ಥಳಕ್ಕೆ ನೀಡಲಾಗಿರುವ ಕೋಡ್'ಅನ್ನು ಒತ್ತಿದರೆ ಆ ಸ್ಥಳದಲ್ಲಿ ಟ್ಯಾಕ್ಸಿ ನಿಂತು ಬಾಗಿಲು ತೆರೆಯುತ್ತದೆ. ಈ ಟ್ಯಾಕ್ಸಿಯಲ್ಲಿ ಸಂಚರಿಸಲು ಟಿಕೆಟ್ ದರ ಇನ್ನೂ ಅಂತಿಮವಾಗಿಲ್ಲ. ಫೋಡ್ ಕಾರ್ ಯೋಜನೆಗೆ ಪ್ರತಿ ಕಿ.ಮೀ.ಗೆ 50 ಕೋಟಿ ರು. ವೆಚ್ಚ ತಲುಗಲಿದೆ ಎಂದು ಬಿಬಿಎಂಪಿ ಆಯುಕ್ತ ಆರ್. ಮಂಜುನಾಥ್ ಪ್ರಸಾದ್ ಅವರು ‘ಕನ್ನಡಪ್ರಭ’ಗೆ ಮಾಹಿತಿ ನೀಡಿದ್ದಾರೆ.
3 ಕಂಪನಿಗಳು ಪಾಸ್: ಈಗಾಗಲೇ ನಗರಕ್ಕೆ ಪೋಡ್ ಟ್ಯಾಕ್ಸಿ ಸೇವೆ ಒದಗಿಸಲು ಅಗತ್ಯ ತಾಂತ್ರಿಕ ಸಾಮರ್ಥ್ಯ ಹೊಂದಿರುವ ಕಂಪನಿಗಳ ಹುಡುಕಾಟಕ್ಕೆ ಬಿಬಿಎಂಪಿ ಆಹ್ವಾನಿಸಿದ್ದ ಟೆಂಡರ್'ಗೆ ಮೂರು ವಿದೇಶಿ ಕಂಪನಿಗಳು ಮುಂದೆ ಬಂದಿದ್ದು ತಮ್ಮ ತಾಂತ್ರಿಕ ಸಾಮರ್ಥ್ಯದ ಪ್ರದರ್ಶಿಸಿವೆ. ಸಿಂಗಾಪುರದ ಅಲ್ಟ್ರಾ ಫೈರ್'ವುಡ್ ಗ್ರೀನ್ ಟ್ರಾನ್ಸ್'ಫೋರ್ಟ್ ಪ್ರೈ.ಲಿ, ಅಮೆರಿಕದ ಜೆಪಿಓಡಿಎಸ್ ಐಎನ್'ಸಿ ಯುಎಸ್ಎ ಮತ್ತು ಸ್ಕೈ ಟ್ರಾನ್ ಏಶಿಯಾ ಎಂಬ 3 ಕಂಪನಿಗಳು ತಾಂತ್ರಿಕ ಸಾಮರ್ಥ್ಯದಲ್ಲಿ ಪಾಸಾಗಿವೆ. ಈ ಕಂಪನಿಗಳು ತಾವು ಸಿದ್ಧಪಡಿಸಿದ ಪ್ರಾಜೆಕ್ಟ್ ಬಿಬಿಎಂಪಿಗೆ ಸಲ್ಲಿಸಿದ್ದು, ಈ ಪ್ರಾಜೆಕ್ಟ್' ಗಳನ್ನು ಬಿಬಿಎಂಪಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್'ಸಿ)ನ ತಜ್ಞರಿಂದ ಮೌಲ್ಯಮಾಪನ ನಡೆಸಿದೆ. ಮೌಲ್ಯಮಾಪನದಲ್ಲಿ ಪ್ರಾಜೆಕ್ಟ್'ಗಳಿಗೆ ಐಐಎಸ್'ಸಿ ಅನುಮೋದಿಸಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ‘ಪೋಡ್ ಕಾರ್’ ಯೋಜನೆ ಜಾರಿಗೆ ‘ಯೋಜನೆ ವಿನ್ಯಾಸ, ನಿರ್ಮಾಣ, ಹಣಕಾಸು ಹೂಡಿಕೆ ಮತ್ತು ನಿರ್ವಹಣೆ’(ಡಿಬಿಓಟಿ) ಮಾದರಿಯಲ್ಲಿ ಟೆಂಟರ್ ಆಹ್ವಾನಿಸಲಾಗಿದೆ. ಡಿ.14ರವರೆಗೆ ಕಂಪನಿಗಳು ಬಿಡ್ ಮಾಡಲು ಅವಕಾಶ ನೀಡಲಾಗಿದೆ. ಡಿಬಿಓಟಿಯಡಿ ಯೋಜನೆ ಜಾರಿಯಿಂದ ಬಿಬಿಎಂಪಿ ಒಂದು ಪೈಸವನ್ನೂ ಹೂಡಿಕೆ ಮಾಡುವಂತಿರುವುದಿಲ್ಲ. ಯೋಜನೆಯ ವಿನ್ಯಾಸ, ನಿರ್ಮಾಣ, ಹಣಕಾಸು ಹೂಡಿಕೆ ಮತ್ತು ನಿರ್ವಹಣೆ ಸಂಪೂರ್ಣ ಟೆಂಡರ್ ಪಡೆದ ಸಂಸ್ಥೆಯದ್ದೇ ಆಗಿರುತ್ತದೆ. ಮುಂದಿನ 30 ವರ್ಷಗಳ ಕಾಲ ಟೆಂಡರ್ ಪಡೆದ ಕಂಪನಿ ನಿರ್ವಹಿಸಿ ಬಿಬಿಎಂಪಿಗೆ ಹಸ್ತಾಂತರಿಸಬೇಕು.
ವಿದೇಶದಲ್ಲಿ ಪೋಡ್ ಟ್ಯಾಕ್ಸಿ ಸೂಪರ್'ಹಿಟ್: ಪೋಡ್ ಕಾರುಗಳು ವಿದೇಶದಲ್ಲಿ ಸಾಕಷ್ಟು ಹೆಸರು ಮಾಡಿವೆ. ವಿಶ್ವದಲ್ಲೇ ಮೊದಲ ಬಾರಿಗೆ ಪೋಡ್ ಟ್ಯಾಕ್ಸಿ ರೀತಿ ವ್ಯವಸ್ಥೆ ಆವಿಷ್ಕಾರವಾಗಿದ್ದು ಅಮೆರಿಕದಲ್ಲಿ. ಇಲ್ಲಿನ ವೆಸ್ಟ್ ವರ್ಜಿನಿಯಾದ ಮೋರ್ಗಾಂಟೌನ್'ನಲ್ಲಿ 1975ರಲ್ಲೇ ಇದನ್ನು ಅಳವಡಿಸಲಾಗಿತ್ತು. ಈ ಸೇವೆ ಈಗಲೂ ಚಾಲ್ತಿಯಲ್ಲಿದ್ದು, ಅದರಲ್ಲಿ 20 ಮಂದಿ ಪ್ರಯಾಣಿಸಬಹುದಾಗಿದೆ. ಹಾಗೆಯೇ ವಿಶ್ವಾದ್ಯಂತ ಇಂದು ಹಲವು ಕಂಪನಿಗಳು ಪೋಡ್ ಟ್ಯಾಕ್ಸಿ ವ್ಯವಸ್ಥೆ ಅಭಿವೃದ್ಧಿಪಡಿಸುತ್ತವೆ. ಲಂಡನ್'ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಮತ್ತು ಅಬುಧಾಬಿಯ ಮಸಋರ್ ಸಿಟಿ ಪೋಡ್ ಟ್ಯಾಕ್ಸಿ ವ್ಯವಸ್ಥೆ ಸಾಕಷ್ಟು ಪ್ರಸಿದ್ಧ. ದಕ್ಷಿಣ ಕೊರಿಯಾದ ಶುಚೆನ್'ನಲ್ಲೂ ಪೋಡ್ ಟ್ಯಾಕ್ಸಿ ವ್ಯವಸ್ಥೆ ಇದೆ
