ಗೋಡೌನಲ್ಲಿ 10 ಕೋಟಿ!| ವಾರ್ಡ್‌ ಹೆಸರಿದ್ದ ಗೋಣಿಗಳಲ್ಲಿ ಹಣ| ಮತದಾರರಿಗೆ ಹಂಚಲು ಸಂಗ್ರಹ ಶಂಕೆ| ತಮಿಳುನಾಡಿನಲ್ಲಿ ಡಿಎಂಕೆ ಖಜಾಂಚಿ ಆಪ್ತನ ಸಿಮೆಂಟ್‌ ಗೋಡೌನ್‌ಗೆ ಐಟಿ ದಾಳಿ|

ವೆಲ್ಲೂರು[ಏ.02]: ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡಿಎಂಕೆ ನಾಯಕರೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು, ಸೋಮವಾರ ಭರ್ಜರಿ 10 ಕೋಟಿ ರು. ನಗದು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಡಿಎಂಕೆ ಪದಾಧಿಕಾರಿ ಶ್ರೀನಿವಾಸನ್‌ ಎಂಬುವವರಿಗೆ ಸೇರಿದ ಸಿಮೆಂಟ್‌ ಗೋಡೌನ್‌ ಮೇಲೆ ದಾಳಿ ನಡೆಸಿದ ವೇಳೆ ಗೋಣಿ ಚೀಲ, ಕಾರ್ಡ್‌ಬೋರ್ಡ್‌ ಬಾಕ್ಸ್‌ಗಳಲ್ಲಿ ಜೋಡಿಸಿದ್ದ ವಿವಿಧ ಮೌಲ್ಯದ 10 ಕೋಟಿ ರು. ನಗದು ಪತ್ತೆಯಾಗಿದೆ.

ಹಣದ ಬ್ಯಾಗ್‌ಗಳ ಮೇಲೆ, ಅದನ್ನು ಯಾವ ವಾರ್ಡ್‌ಗಳಿಗೆ ನೀಡಬೇಕು ಎಂದು ಹೆಸರು ಬರೆಯಲಾಗಿದೆ. ಹೀಗಾಗಿ ಇದು ಮತದಾರರಿಗೆ ಹಂಚಲು ಇಟ್ಟಹಣವೆಂದು ಖಚಿತಪಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಶೇಷವೆಂದರೆ, ಶ್ರೀನಿವಾಸನ್‌ ಅವರು ಡಿಎಂಕೆಯ ಖಜಾಂಚಿ, ಮಾಜಿ ಲೋಕೋಪಯೋಗಿ ಸಚಿವ ದೊರೈ ಮುರುಗನ್‌ ಅವರ ಅತ್ಯಾಪ್ತ. ಜೊತೆಗೆ ಮುರುಗನ್‌ ಅವರ ಪುತ್ರ ಕಥಿರ್‌ ಆನಂದ್‌ ಈ ಬಾರಿ ವೆಲ್ಲೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೀಗಾಗಿ ಹಣ ಮುರುಗನ್‌ ಕುಟುಂಬಕ್ಕೆ ಸೇರಿದ್ದು ಎಂಬ ಅನುಮಾನ ಮತ್ತಷ್ಟುಬಲವಾಗಿದೆ.

ಕಳೆದ ಶುಕ್ರವಾರದಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊರೈ ಮುರುಗನ್‌ ಅವರಿಗೆ ಸೇರಿದ ಕಚೇರಿ, ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮುರುಗನ್‌ ಅವರಿಗೆ ಸೇರಿದ ಕಾಲೇಜೊಂದರಿಂದ ಈ ಹಣವನ್ನು ಗೋಡೌನ್‌ಗೆ ಸಾಗಿಸಲಾಗಿತ್ತು ಎನ್ನಲಾಗಿದೆ.