ಬೆಂಗಳೂರು (ಮಾ. 01): ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾನದ ರೂಪದಲ್ಲಿ ಹಣ, ಜಮೀನುಗಳು, ಮೂಲ ಸೌಕರ್ಯ ಸೇರಿದಂತೆ ವಿವಿಧ ಕೊಡುಗೆ ನೀಡುವ ದಾನಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾಲೇಜುಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ನೀಡುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆಯು ಹೊರತಂದಿರುವ ‘ಸಂಪ್ರದಾನ’ ಎಂಬ ಇ-ಪೋರ್ಟಲ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಆದಾಯ ತೆರಿಗೆ ಕಲಂ ‘80 ಜಿ’ ಅಡಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ದಾನ ನೀಡುವವರು ಪೋರ್ಟಲ್‌ಗೆ ಭೇಟಿ ನೀಡಿ ದಾನ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಸರ್ಕಾರಿ, ಅನುದಾನಿತ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳ ಅಗತ್ಯಗಳು, ಬೇಡಿಕೆಗಳು, ಪ್ರಸ್ತುತ ಇರುವ ಮೂಲ ಸೌಕರ್ಯಗಳು ಮಾಹಿತಿಗಳು ಪೋರ್ಟಲ್‌ನಲ್ಲಿ ಸಿಗಲಿವೆ. ಕಾರ್ಪೊರೇಟ್‌ ಕಂಪನಿಗಳು, ದಾನಿಗಳು, ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಪ್ರಾಯೋಜಕರು ಹಣದ ರೂಪದಲ್ಲಿ ಅಥವಾ ವಸ್ತುಗಳ ರೂಪದಲ್ಲಿ ಜಮೀನು, ಕಟ್ಟಡಗಳು, ತರಗತಿ ಕೊಠಡಿಗಳು, ಪ್ರಯೋಗಾಲಯದ ಉಪಕರಣಗಳು, ಪುಸ್ತಕಗಳು, ಕಂಪ್ಯೂಟರ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ದಾನವಾಗಿ ನೀಡಬಹುದು ಎಂದರು.

‘ಸೇವಾ ಸಿಂಧು’ ಯೋಜನೆ:

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣ ಪತ್ರ, ತಾತ್ಕಾಲಿಕ ಪ್ರಮಾಣ ಪತ್ರ, ವಲಸೆ ಪ್ರಮಾಣಪತ್ರ, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಉತ್ತರ ಪತ್ರಿಕೆಗಳ ಫೋಟೋ ಪ್ರತಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ನೀಡುವುದಕ್ಕಾಗಿ ‘ಸೇವಾ ಸಿಂಧು’ ಯೋಜನೆ ಜಾರಿಗೊಳಿಸಿದೆ.

412 ಪ್ರಥಮ ದರ್ಜೆ ಕಾಲೇಜು, 83 ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ತುಮಕೂರು ವಿಶ್ವವಿದ್ಯಾಲಯಗಳು ಸದ್ಯ ಈ ಯೋಜನೆಯಡಿ ಕಾರ್ಯ ನಿರ್ವಹಿಸಲಿವೆ. ಮುಂದಿನ ದಿನಗಳಲ್ಲಿ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಸೇವೆ ಸಿಗಲಿವೆ ಎಂದು ಸಚಿವರು ತಿಳಿಸಿದರು.