ನವದೆಹಲಿ[ಡಿ.05]: ಕಾಂಗ್ರೆಸ್‌ ಪಕ್ಷದ ಮುಖವಾಣಿ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆಯ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕರ್ನಾಟಕದ ಕಾಂಗ್ರೆಸ್‌ ಮುಖಂಡ ಆಸ್ಕರ್‌ ಫರ್ನಾಂಡಿಸ್‌ ವಿರುದ್ಧದ ತೆರಿಗೆ ಮರುಮೌಲ್ಯಮಾಪನಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮೋದನೆ ನೀಡಿದೆ. ಇದರಿಂದ ಪ್ರಕರಣದಲ್ಲಿ ಈ ಮೂವರಿಗೂ ಸದ್ಯದ ಮಟ್ಟಿಗೆ ಹಿನ್ನಡೆಯಾದಂತಾಗಿದೆ.

ಆದರೆ ತನ್ನ ಆದೇಶವನ್ನು ಜ.8ರವರೆಗೆ ಜಾರಿಗೆ ತರಬಾರದು ಎಂಬ ಷರತ್ತನ್ನು ಕೋರ್ಟ್‌ ವಿಧಿಸಿದ್ದು, ಜನವರಿ 8ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಗುಣಾವಗುಣಗಳನ್ನು ತಾನು ವಿಶ್ಲೇಷಿಸಲು ಈಗ ಹೋಗುವುದಿಲ್ಲ. ಯಾವುದೇ ಅಭಿಪ್ರಾಯವನ್ನೂ ತಾನು ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ ನ್ಯಾ ಎ.ಕೆ. ಸಿಕ್ರಿ ಹಾಗೂ ಅಬ್ದುಲ್‌ ನಜೀರ್‌ ಅವರ ಪೀಠ, ವಿಚಾರಣೆ ಮುಂದೂಡಿತು.

ಆದರೆ ಈ ಆದೇಶಕ್ಕೆ ತಡೆ ನೀಡಬಾರದು. ತೆರಿಗೆ ಮರುಮೌಲ್ಯಮಾಪನಕ್ಕೆ ಆದಾಯ ತೆರಿಗೆ ಇಲಾಖೆಗೆ ಅವಕಾಶ ನೀಡಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಮಂಗಳವಾರ ನಮಗೆ ಇದರ ಸವಿಸ್ತಾರ ವಿಚಾರಣೆ ಮಾಡಲಾಗದು. ಏಕೆಂದರೆ ಸಮಯಾಭಾವವಿದೆ. ಹೀಗಾಗಿ ಇಂದು ನಾವು ಕೇವಲ ತೆರಿಗೆ ಮರುಮೌಲ್ಯಮಾಪನಕ್ಕೆ ಸಮ್ಮತಿಸಿ ಮಧ್ಯಂತರ ಆದೇಶವನ್ನಷ್ಟೇ ನೀಡುತ್ತೇವೆ. ಮುಂಬರುವ ಕಲಾಪಗಳಲ್ಲಿ ಇದರ ಸವಿಸ್ತಾರ ವಿಚಾರಣೆ ಆಗಬೇಕಿದೆ. ಹೀಗಾಗಿ ಪ್ರಕರಣದ ಗುಣಾವಗುಣಗಳ ಬಗ್ಗೆ ನಾವು ವಿಶ್ಲೇಷಿಸಲು ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿತು.

ನ್ಯಾಷನಲ್‌ ಹೆರಾಲ್ಡ್‌ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಂಪನಿಯ ಆಡಳಿತ ಮಂಡಳಿಯಲ್ಲಿದ್ದ ಸೋನಿಯಾ, ರಾಹುಲ್‌ ಹಾಗೂ ಆಸ್ಕರ್‌ ಅವರ 2011-12ನೇ ಸಾಲಿನ ತೆರಿಗೆ ವಿವರಗಳ ಮರುಮೌಲ್ಯಮಾಪನಕ್ಕೆ ಆದಾಯ ತೆರಿಗೆ ಮುಂದಾಗಿತ್ತು. ಇದಕ್ಕೆ ದಿಲ್ಲಿ ಹೈಕೋರ್ಟ್‌ ಅನುಮೋದನೆ ನೀಡಿತ್ತು. ದಿಲ್ಲಿ ಹೈಕೋರ್ಟ್‌ ನೀಡಿದ ಅನುಮೋದನೆಯನ್ನು ಗಾಂಧಿದ್ವಯರು ಹಾಗೂ ಆಸ್ಕರ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಡಿ.4ರಿಂದ ಅಂತಿಮ ವಿಚಾರಣೆ ನಡೆಸುವುದಾಗಿ ನ.13ರಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಆರೋಪವೇನು?

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಕಂಪನಿಯನ್ನು ಅಕ್ರಮ ಮಾರ್ಗದಿಂದ ಖರೀದಿಸಿದ ಆರೋಪ ರಾಹುಲ್‌, ಸೋನಿಯಾ, ಆಸ್ಕರ್‌ ಒಡೆತನದ ಯಂಗ್‌ ಇಂಡಿಯಾ ಕಂಪನಿ ಮೇಲೆ ಇದೆ. 90.25 ಕೋಟಿ ರು. ಮೌಲ್ಯದ ಅಸೋಸಿಯೇಟೆಡ್‌ ಜರ್ನಲ್ಸ್‌ ಕಂಪನಿಯನ್ನು ಕೇವಲ 50 ಲಕ್ಷ ರುಪಾಯಿ ನೀಡಿ ಖರೀದಿಸಲಾಗಿತ್ತು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ದೂರಿದ್ದರು. ಇದೇ ವೇಳೆ, ತೆರಿಗೆ ವಿವರ ಸಲ್ಲಿಕೆ ವೇಳೆ ಯಂಗ್‌ ಇಂಡಿಯಾದಲ್ಲಿನ ತಮ್ಮ ಷೇರು ಮೌಲ್ಯ 68 ಲಕ್ಷ ರು. ಎಂದು ರಾಹುಲ್‌ ಹೇಳಿದ್ದರು. ಆದರೆ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿದಾಗ ಅದರಲ್ಲಿರುವ ರಾಹುಲ್‌ ಷೇರುಗಳ ಮೌಲ್ಯ 154 ಕೋಟಿ ರುಪಾಯಿ ಎಂದು ತಿಳಿದುಬಂದಿತ್ತು. ಹೀಗಾಗಿ ಇದೊಂದು ತೆರಿಗೆ ವಂಚನೆ ಪ್ರಕರಣ ಎಂಬ ತೀರ್ಮಾನಕ್ಕೆ ಆದಾಯ ತೆರಿಗೆ ಇಲಾಖೆ ಬಂದಿತ್ತು ಹಾಗೂ ಮರುಮೌಲ್ಯಮಾಪನಕ್ಕೆ ಮುಂದಾಗಿತ್ತು. ಅಲ್ಲದೆ, 2011-12ನೇ ಸಾಲಿನಲ್ಲಿ 249.15 ಕೋಟಿ ರು. ತೆರಿಗೆ ಕಟ್ಟಿಎಂದು ಯಂಗ್‌ ಇಂಡಿಯಾಗೆ ಆದಾಯ ತೆರಿಗೆ ಇಲಾಖೆ ಡಿಮ್ಯಾಂಡ್‌ ನೋಟಿಸ್‌ ನೀಡಿತ್ತು.