ಜಮೀರ್‌ ಅಹ್ಮದ್‌ಖಾನ್‌ ಹಾಗೂ ಯು.ಟಿ. ಖಾದರ್‌ಗೆ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಸಾಮರ್ಥ್ಯವಿಲ್ಲ. ಮುಸ್ಲಿಂ ನಾಯಕತ್ವವನ್ನು ಮುಗಿಸುವ ಯತ್ನವಾಗಿಯೇ ಅನರ್ಹ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ತನ್ವೀರ್‌ ಸೇಠ್‌ ಮೊದಲ ಬಾರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು/ಉಡುಪಿ : ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಜೆಡಿಎಸ್‌-ಕಾಂಗ್ರೆಸ್‌ನ ಮುಸ್ಲಿಂ ಸಮಾಜದ ಮುಖಂಡರಲ್ಲಿ ಜಟಾಪಟಿ ಆರಂಭವಾಗಿದೆ. ಜಮೀರ್‌ ಅಹ್ಮದ್‌ಖಾನ್‌ ಹಾಗೂ ಯು.ಟಿ. ಖಾದರ್‌ಗೆ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಸಾಮರ್ಥ್ಯವಿಲ್ಲ. ಮುಸ್ಲಿಂ ನಾಯಕತ್ವವನ್ನು ಮುಗಿಸುವ ಯತ್ನವಾಗಿಯೇ ಅನರ್ಹ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ತನ್ವೀರ್‌ ಸೇಠ್‌ ಮೊದಲ ಬಾರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಇದಕ್ಕೆ ಯು.ಟಿ. ಖಾದರ್‌ ತಿರುಗೇಟು ನೀಡಿದ್ದಾರೆ. ಯಾರು ಅರ್ಹರು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ನಾನು ಮುಸ್ಲಿಂ ಸಮುದಾಯದ ನಾಯಕ ಎಂದು ಹೇಳಿಲ್ಲ. ಮುಸ್ಲಿಂ ಸಮುದಾಯ ಯಾರ ಕಿಸೆಯಲ್ಲಿಯೂ ಇಲ್ಲ. ಸಂಪುಟದಲ್ಲಿ ನಾನು ಯಾವ ಜಾತಿಯ ಪ್ರತಿನಿಧಿಯೂ ಅಲ್ಲ. ನನಗೆ ಹಿಂದೂ-ಮುಸ್ಲಿಂ ಎಲ್ಲರೂ ಒಂದೇ ಎಂದು ಖಾದರ್‌ ಉಡುಪಿಯಲ್ಲಿ ಗುಡುಗಿದ್ದಾರೆ.

ಸೇಠ್‌ ಆಕ್ರೋಶ: ಸಚಿವ ಸ್ಥಾನ ವಂಚಿತ ತನ್ವೀರ್‌ಸೇಠ್‌ ಅವರು ಜೆಡಿಎಸ್‌ನಿಂದ ವಲಸೆ ಬಂದ ಜಮೀರ್‌ ಅಹ್ಮದ್‌ಗೆ ಸಚಿವ ಸ್ಥಾನ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಸ್ಲಿಂ ಸಮುದಾಯದ ನಾಯಕತ್ವ ಮುಗಿಸುವ ಯತ್ನವಿದು ಎಂದು ಗುರುವಾರ ಹೊಸ ಬಾಂಬ್‌ ಸಿಡಿಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಭೇಟಿಗೆ ಕುಮಾರಕೃಪಾ ಅತಿಥಿಗೃಹಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಖಾದರ್‌ ಹಾಗೂ ಜಮೀರ್‌ ಅಹ್ಮದ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಸಮುದಾಯ ಪ್ರತಿನಿಧಿಸುವ ಸಾಮರ್ಥ್ಯವಿಲ್ಲ . ಇಂತಹ ಅರ್ಹರಲ್ಲದವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಕೊಟ್ಟಿರುವುದು ಅಸಮಧಾನ ಮೂಡಿಸಿದೆ’ ಎಂದರು.

ಅವರಿಬ್ಬರಿಗೂ ರಾಜ್ಯ ಮಟ್ಟದಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿಲ್ಲ. ಅಂತಹ ನಾಯಕತ್ವ ಗುಣ ಅವರಲ್ಲಿ ಇಲ್ಲ. ಜಮೀರ್‌ ಅಹ್ಮದ್‌ಖಾನ್‌ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದ್ದರು. ಅಲ್ಲದೇ, ಅವರು ಜೆಡಿಎಸ್‌ನಿಂದ ನಿನ್ನೆ-ಮೊನ್ನೆ ನಮ್ಮ ಪಕ್ಷಕ್ಕೆ ವಲಸೆ ಬಂದವರು. ಪಕ್ಷದಲ್ಲಿರುವ ಮುಖಂಡರನ್ನು ಕಡೆಗಣಿಸಿ ಬೇರೆ ಪಕ್ಷದಿಂದ ಬಂದ ಜಮೀರ್‌ಗೆ ಅವಕಾಶ ನೀಡಲಾಗಿದೆ. ಇದು ಮುಸ್ಲಿಂ ಸಮುದಾಯದ ನಾಯಕತ್ವ ಮುಗಿಸುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮಾತ್ರವಲ್ಲ. ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇವೆ. ರಾಜ್ಯ ಮಟ್ಟದಲ್ಲಿ ಮುಸ್ಲಿಂ ನಾಯಕತ್ವ ನಿರ್ವಹಿಸುವಂಥವರಿಗೆ ಇನ್ನೊಂದು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದರು.

ಖಾದರ್‌ ತಿರುಗೇಟು: ಯಾರು ಅರ್ಹರು ಎಂಬುದನ್ನು ಜನರು ತೀರ್ಮಾನಿಸುತ್ತಾರೆ. ನಾನು ಮುಸ್ಲಿಂ ಸಮುದಾಯದ ನಾಯಕ ಎಂದು ಹೇಳಿಲ್ಲ. ಮುಸ್ಲಿಂ ಸಮುದಾಯ ಯಾರ ಕಿಸೆಯಲ್ಲಿಯೂ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಉಡುಪಿಯಲ್ಲಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಮುಸ್ಲಿಮರನ್ನು ಪ್ರತಿನಿಧಿಸಲು ಖಾದರ್‌ ಲಾಯಕ್‌ ಅಲ್ಲ ಎಂಬ ಮಾಜಿ ಸಚಿವ ತನ್ವೀರ್‌ ಸೇಠ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು.

ತನ್ವೀರ್‌ಸೇಠ್‌ ನನ್ನ ಸಹೋದರ. ನನ್ನ ಮೇಲೆ ಪ್ರೀತಿಯಿಂದ ಈ ಮಾತು ಹೇಳಿರಬಹುದು. ಅವರ ಸಚಿವ ಸ್ಥಾನದ ಆಸೆ ಆದಷ್ಟುಬೇಗ ಈಡೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ, ನಾನು ಲಾಯಕ್‌ ಹೌದೇ ಅಥವಾ ಅಲ್ಲವೇ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ಯಾರು ಹೇಗೆ ಎನ್ನುವುದು ಪಕ್ಷದ ಹೈಕಮಾಂಡ್‌ಗೆ ಗೊತ್ತಿದೆ. ಆದ್ದರಿಂದ ಯಾರು ಮಂತ್ರಿಯಾಗಬೇಕು ಎಂದು ಹೈಕಮಾಂಡ್‌ ತೀರ್ಮಾನ ಮಾಡಿದೆ. ನಾನು ತನ್ವೀರ್‌ ಸೇಠ್‌ ಅವರ ಸಚಿವ ಸ್ಥಾನವನ್ನು ಕಸಿದುಕೊಂಡಿಲ್ಲ. ಇದು ನನಗೆ ಹೈಕಮಾಂಡ್‌ ಕೊಟ್ಟಿರುವ ಸ್ಥಾನ ಎಂದು ಹೇಳಿದರು.

ನನಗೆ ಮುಸ್ಲಿಂ, ಹಿಂದೂ ಸಮುದಾಯ ಸೇರಿದಂತೆ ರಾಜ್ಯದ ಆರೂವರೆ ಕೋಟಿ ಜನರೂ ಒಂದೇ. ಹಿಂದಿನ ಸರ್ಕಾರದಲ್ಲಿ ಆರೋಗ್ಯ ಮತ್ತು ಆಹಾರ ಖಾತೆಗಳನ್ನು ಯಾವುದೇ ಆರೋಪಗಳಲ್ಲದಂತೆ ನಿರ್ವಹಿಸಿದ್ದೇನೆ. ಈಗಲೂ ಆ ಭರವಸೆ ಇದೆ. ಅಗತ್ಯವಿದ್ದಾಗ ಹಿರಿಯರಿಂದ ಸಲಹೆ ಪಡೆಯುತ್ತೇನೆ ಎಂದರು.

ನಾನು ಮಂತ್ರಿ ಆಗಬೇಕು ಎಂದು ತೀರ್ಮಾನಿಸಿದ್ದು ಹೈಕಮಾಂಡ್‌. ಲಾಯಕ್‌ ಹೌದೇ, ಅಲ್ವೇ ಅಂತ ಜನ ನಿರ್ಧರಿಸುತ್ತಾರೆ. ತನ್ವೀರ್‌ ಅವರ ಸಚಿವ ಸ್ಥಾನದ ಆಸೆ ಬೇಗ ಈಡೇರಲಿ ಎಂದು ಜನರಲ್ಲಿ ಪ್ರಾರ್ಥಿಸುತ್ತೇನೆ.

- ಯು.ಟಿ.ಖಾದರ್‌, ಸಚಿವ