Asianet Suvarna News Asianet Suvarna News

ಕಾಡು ಬೆಕ್ಕಿನ ಮಲದಿಂದ ಕಾಫಿ ಬೀಜ ಹೆಕ್ತಾರೆ: ಇವರ ಸಿವೆಟ್ ಕಾಫಿ ಎಲ್ಲೆಡೆ ಫೇಮಸ್

ಪುನುಗು ಬೆಕ್ಕು(ಕಾಡುಬೆಕ್ಕು) ಕಾಫಿ ಬೀಜಗಳನ್ನು ತಿಂದು ಮಲ ವಿಸರ್ಜಿಸಿದ ಬಳಿಕ ಅದರಲ್ಲಿರುವ ಬೀಜಗಳನ್ನು ಹೆಕ್ಕಿ ಸಂಸ್ಕರಿಸಿ ತಯಾರಿಸಿದ ಕಾಫಿ ಪುಡಿಯೇ ಸಿವೆಟ್ ಕಾಫಿ. ಕೊಡಗಿನ ತಮ್ಮು ಪೂವಯ್ಯ ಮಾಡೋದು ಇದೇ ಉದ್ಯಮ

Tammu Puvayya From Kodagu bags Suvarna Kannadaprabha Raita Ratna award for Civet coffee Production dpl
Author
Bangalore, First Published Feb 12, 2021, 1:40 PM IST

ರೈತ ರತ್ನ ತಮ್ಮು ಪೂವಯ್ಯ
ವಿಭಾಗ: ಕೃಷಿ ಉತ್ಪನ್ನ ಮಾರಾಟಗಾರರು
ಊರು, ಜಿಲ್ಲೆ: ಮಡಿಕೇರಿ (ಕೊಡಗು)

    
ಕೊಡಗಿನ ಸಿವೆಟ್ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಬೇಡಿಕೆ ಇದೆ. ಪುನುಗು ಬೆಕ್ಕು(ಕಾಡುಬೆಕ್ಕು) ಕಾಫಿ ಬೀಜಗಳನ್ನು ತಿಂದು ಮಲ ವಿಸರ್ಜಿಸಿದ ಬಳಿಕ ಅದರಲ್ಲಿರುವ ಬೀಜಗಳನ್ನು ಹೆಕ್ಕಿ ಸಂಸ್ಕರಿಸಿ ತಯಾರಿಸಿದ ಕಾಫಿ ಪುಡಿಯೇ ಸಿವೆಟ್ ಕಾಫಿ.

ಇದು ರುಚಿಕರ ಹಾಗೂ ಪರಿಮಳಭರತವಾಗಿರುವುದರಿಂದ ಈ ಕಾಫಿಗೆ ಬೇಡಿಕೆ ಹೆಚ್ಚು. ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಕೊಡಗಿನ ಮಡಿಕೇರಿಯವರಾದ ತಮ್ಮು ಪೂವಯ್ಯ. ತಮ್ಮು ಪೂವಯ್ಯ ಅವರು ಕಾಫಿ ಉದ್ಯಮ ನಡೆಸುತ್ತಿದ್ದಾರೆ. 12 ಎಕರೆ ಕಾಫಿ ಎಸ್ಟೇಟ್ ಇದೆ. ಇದರಲ್ಲಿ ರೋಬೊಸ್ಟಿಕಾ ಮತ್ತು ಅರೇಬಿಕಾ ಕಾಫಿಯನ್ನು ಬೆಳೆಯುತ್ತಾರೆ.

ತಲೆ ಮೇಲೆ ಬುಟ್ಟಿ ಇಟ್ಟು ವ್ಯಾಪಾರ ಮಾಡ್ತಿದ್ದವರಿಗೆ ಈಗ 37 ಕಡೆ ಫಿಶ್ ಮಾರ್ಕೆಟ್

ಕಾಫಿಯನ್ನು ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್(ಸಿಸಿಸಿ) ಎಂಬ ಸ್ಟಾರ್ಟಪ್ ಕಂಪನಿ ಮೂಲಕ ಐನ್‌ಮನೆ ಎಂಬ ಬ್ರಾಂಡ್ ಹೆಸರಲ್ಲಿ ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ 20 ಕೆ.ಜಿ. ಸಿವೆಟ್ ಕಾಫಿಯನ್ನು ಸಂಗ್ರಹಿಸಲಾಗುತ್ತಿತ್ತು. ನಂತರ 60 ಕೆ.ಜಿ.ಯಷ್ಟು, ಈ ವರ್ಷ ಒಟ್ಟು 200 ಕೆ.ಜಿ. ಕಾಫಿಯನ್ನು ಸಂಗ್ರಹಿಸಲಾಗಿದೆ. ಕಾಫಿ ಬೆಳೆಗಾರರಿಂದ ಸಂಗ್ರಹಿಸಿದ ಕಚ್ಚಾ ಸಿವೆಟ್ ಕಾಫಿಗೆ ಕೆಜಿಯೊಂದಕ್ಕೆ 2000 ರು. ನೀಡುತ್ತಾರೆ.

ಆ ಕಾಫಿ ಬೀಜವನ್ನು ವಿವಿಧ ಹಂತದಲ್ಲಿ ಸಂಸ್ಕರಿಸಿ, ಅದನ್ನು ಹುಡಿ ಮಾಡಿ ಮಾರಾಟ ಮಾಡುತ್ತಾರೆ. ಪೂರ್ಣ ಸಿದ್ಧವಾದ 1 ಕೆ.ಜಿ. ಕಾಫಿಗೆ 7 ಸಾವಿರ ರು. ಬೆಲೆ ಇದೆ. ಮಡಿಕೇರಿಯ ಮಹೀಂದ್ರಾ ರೆಸಾರ್ಟ್‌ನಲ್ಲಿ ಸಿವೆಟ್ ಕಾಫಿಯ ಮಳಿಗೆ ಇದೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸಿವೆಟ್ ಕಾಫಿಯನ್ನು ಖರೀದಿಸುತ್ತಾರೆ.

ಸಾಧನೆಯ ವಿವರ:

ಉದ್ಯಮಿ ತಮ್ಮು ಪೂವಯ್ಯ ಅವರು ಮಡಿಕೇರಿಯ ವಿವಿಧ ಕಾಫಿ ಎಸ್ಟೇಟ್‌ಗಳಿಂದ 10 ರಿಂದ 12 ಟನ್ ಅರೇಬಿಕಾ, ರೋಬೋಸ್ಟಿಕಾ ಕಾಫಿಯನ್ನು ಪಡೆದು ದೇಶ-ವಿದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೇ ಮಡಿಕೇರಿಯಲ್ಲಿ 5 ಮತ್ತು ಬೆಂಗಳೂರಿನಲ್ಲಿ 1 ಐನ್‌ಮನೆ ಹೆಸರಿನಲ್ಲಿ ಶಾಪ್ ಹೊಂದಿದ್ದಾರೆ. ಇದರಲ್ಲಿ ವಿವಿಧ ಬಗೆಯ ಕಾಫಿ, ಚಾಕೋಲೇಟ್ ಸೇರಿದಂತೆ 80ಕ್ಕೂ ಅಧಿಕ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ.

ಗಮನಾರ್ಹ ಅಂಶ:

ಸಿವೆಟ್ ಕಾಫಿ ಹೆಚ್ಚು ರುಚಿ ಹಾಗೂ ಪರಿಮಳ ಹೊಂದಿರುವುದರಿಂದ ಹೊರ ದೇಶದಿಂದಲೂ ಬೇಡಿಕೆ ಇದೆ. 3 ಟನ್ ಸಿವೆಟ್ ಕಾಫಿ ನೀಡುವಂತೆ ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್ ಸ್ಟಾರ್ಪಪ್ ಕಂಪನಿಗೆ ಸೌದಿ ಅರೇಬಿಯಾದಿಂದ ಬೇಡಿಕೆ ಬಂದಿದೆ. ಇದರಿಂದ ತಮ್ಮು ಪೂವಯ್ಯ ಅವರು ಕೊಡಗು ಜಿಲ್ಲೆಯ ಎಲ್ಲಾ ಬೆಳೆಗಾರರಿಗೆ ಈ ಬಗ್ಗೆ ತಿಳಿಸಿ ಸಿವೆಟ್ ಕಾಫಿ ಸಂಗ್ರಹಿಸುತ್ತಿದ್ದಾರೆ.

ವಿವಿಧ ಕಾಫಿ ಎಸ್ಟೇಟ್‌ಗಳಿಂದ ಕಾಫಿಯನ್ನು ಪಡೆದು ಬ್ರೆಜಿಲ್, ಕೆನಡಾ, ಯುರೋಪ್‌ಗೂ ರಫ್ತು ಮಾಡಿದ್ದು ಇವರ ವಿಶೇಷ. ದೇಶದ ವಿವಿಧ ರಾಜ್ಯಗಳಿಗೂ ಇವರೇ ಕಾಫಿಯನ್ನು ರಫ್ತು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

Follow Us:
Download App:
  • android
  • ios