ಚೆನ್ನೈ: ಮೇಕೆದಾಟು ಅಣೆಕಟ್ಟೆಯೋಜನೆ ಕುರಿತಂತೆ ಸಮಾಲೋಚನೆ ನಡೆಸಲು ಸಮಯ ನೀಡಿ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಪತ್ರ ಮುಖೇನ ಇಟ್ಟಿದ್ದ ಕೋರಿಕೆಯನ್ನು ತಮಿಳುನಾಡು ತಿರಸ್ಕರಿಸಿದೆ. ಮೇಕೆದಾಟು ಡ್ಯಾಂ ವಿರುದ್ಧ ತಮಿಳುನಾಡು ಸುಪ್ರೀಂಕೋರ್ಟಿನ ಮೊರೆ ಹೋಗಿದೆ. 

ಕರ್ನಾಟಕದ ಮಾತುಕತೆ ಪ್ರಸ್ತಾವ ಆ ವಿಚಾರಣೆಗೆ ಅಡ್ಡಿಪಡಿಸುವುದೇ ಆಗಿದೆ ಎಂದಿರುವ ಆ ರಾಜ್ಯ, ಮೇಕೆದಾಟು ಕುರಿತ ಯೋಜನಾ ವರದಿ ತಯಾರಿ ಹಾಗೂ ಅಣೆಕಟ್ಟೆ ನಿರ್ಮಾಣವನ್ನು ಕರ್ನಾಟಕ ನಿಲ್ಲಿಸಬೇಕು ಎಂದು ತಾಕೀತು ಮಾಡಿದೆ. ಕಾವೇರಿ ನದಿಗೆ ಅಣೆಕಟ್ಟೆನಿರ್ಮಾಣ ಅಥವಾ ಹೊಸ ಜಲಾಶಯಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಕೆಯು 2018ರ ಫೆ.16ರಂದು ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಉಲ್ಲಂಘನೆ ಎಂದು ತಮಿಳುನಾಡಿನ ಕಾನೂನು ಸಚಿವ ಷಣ್ಮುಗಂ ಅವರು ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನದಿಯಲ್ಲಿ ಹೆಚ್ಚು ನೀರು ಬಂದಿದ್ದರಿಂದ ಅದು ಈ ವರ್ಷ ವ್ಯರ್ಥವಾಗಿ ಸಮುದ್ರ ಸೇರಿದೆ. ಇನ್ನು ಮುಂದೆ ಹೀಗಾಗದಂತೆ ತಡೆಯಲು ಹಾಗೂ ವಿವೇಕಯುತವಾಗಿ ನೀರನ್ನು ಬಿಡುಗಡೆ ಮಾಡಲು ಮೇಕೆದಾಟು ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ತಮಿಳುನಾಡಿಗೇ ಲಾಭವಿದೆ. ಇದನ್ನು ಮನವರಿಕೆ ಮಾಡಿಕೊಡಲು ತಮಿಳುನಾಡು ಸಿಎಂ ಜತೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಕೆಶಿ ತಿಳಿಸಿದ್ದರು.