ನವದೆಹಲಿ :  ಮೇಕೆದಾಟು ಸಮತೋಲನ ಅಣೆಕಟ್ಟೆನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಸಲು ರಾಜ್ಯದ ಕರ್ನಾಟಕ ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ಪ್ರಶ್ನಿಸಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ದುರುದ್ದೇಶ ಪೂರಿತವಾದದ್ದು ಎಂದು ಕರ್ನಾಟಕ ಪ್ರತಿಪಾದಿಸಿದೆ.

ತಮಿಳುನಾಡಿನ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಕರ್ನಾಟಕವು, ರಾಜ್ಯ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ ಅದರ ಅನುಮತಿಗಾಗಿ ಸಲ್ಲಿಸುವುದನ್ನು ತಡೆಯುವ ದುರುದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗೆ ಸಿಂಧುತ್ವವೇ ಇಲ್ಲ ಎಂದು ತಿಳಿಸಿದೆ.

ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯಾದರೆ ತನಗೆ ಕರ್ನಾಟಕದಿಂದ ಮಾಸಿಕವಾಗಿ ಲಭಿಸುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗಲಿದೆ ಎಂಬುದಕ್ಕೆ ತಮಿಳುನಾಡು ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕೇವಲ ಊಹೆ ಆಧಾರದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ವಜಾಗೊಳಿಸಲು ಅರ್ಹವಾಗಿದೆ ಎಂದು ಕರ್ನಾಟಕ ಹೇಳಿದೆ. ಮೇಕೆದಾಟು ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿರುವ ತಮಿಳುನಾಡಿನ ಅರ್ಜಿ ಒಂದು ರೀತಿಯಲ್ಲಿ ಇಡೀ ಕಾವೇರಿ ಪ್ರಕರಣದ ಮರು ವಿಚಾರಣೆ ನಡೆಯಬೇಕು ಎಂಬರ್ಥದಲ್ಲಿದೆ. 

ಒಂದು ವೇಳೆ ತಮಿಳುನಾಡಿನ ಅರ್ಜಿಗೆ ಮಾನ್ಯತೆ ನೀಡಿದರೆ ಅದು ಇಡೀ ಪ್ರಕರಣದ ಮರು ವಿಚಾರಣೆಗೆ ಇಂಬು ನೀಡಲಿದ್ದು ಇದು ತಮಿಳುನಾಡು ಸೇರಿ ಪ್ರತಿವಾದಿ ರಾಜ್ಯಗಳಿಗೆ ಈ ನ್ಯಾಯಾಲಯ ನೀಡಿರುವ ನ್ಯಾಯದಿಂದ ವಂಚಿತರನ್ನಾಗಿಸುವ ಸಾಧ್ಯತೆಯೂ ಇದೆ. ಈ ನ್ಯಾಯಾಲಯವು ಯಾವುದೇ ಕಕ್ಷಿದಾರರ ದೂರನ್ನು ಮೊದಲಿನಿಂದಲೇ ವಿಚಾರಣೆ ನಡೆಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ರಾಜ್ಯ ತನ್ನ ಅರ್ಜಿಯಲ್ಲಿ ಹೇಳಿದೆ.

ತಮಿಳುನಾಡಿನ ಅರ್ಜಿ ಸುಳ್ಳು,  ನಿಷ್ಪ್ರಯೋಜಕ, ಹತಾಶೆಯಿಂದ ಕೂಡಿದ್ದು ಕಾನೂನು ಅಥವಾ ತಥ್ಯದ ನೆಲೆಯಲ್ಲಿ ಅದರ ವಾದಗಳಿಗೆ ಮಾನ್ಯತೆಯೇ ಇಲ್ಲ. ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ನಮೂದಿಸಿರುವ ಎಲ್ಲ ವಾದಗಳನ್ನು ಸುಪ್ರೀಂ ಕೋರ್ಟ್‌ 2018ರ ಫೆಬ್ರವರಿ 16 ರಂದು ನೀಡಿರುವ ಅಂತಿಮ ತೀರ್ಪಿನಲ್ಲಿ ತಿರಸ್ಕರಿಸಿದ್ದು ಹೊಸ ನಿರ್ದೇಶನಗಳ ಅಗತ್ಯವೇ ಇಲ್ಲ. ಈ ಹೊಸ ಅರ್ಜಿಯು ನಿರ್ದೇಶನವನ್ನು ಕೇಳುವ ನೆಪದಲ್ಲಿರುವ ಮರು ಪರಿಶೀಲನಾ ಅರ್ಜಿಯಾಗಿದೆ. ಈ ಅರ್ಜಿ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದ್ದು ಅರ್ಜಿಯನ್ನು ವಜಾಗೊಳಿಸಿ ಎಂದು ಕರ್ನಾಟಕ ಕೇಳಿಕೊಂಡಿದೆ.

ಕರ್ನಾಟಕಕ್ಕೆ ಮೇಕೆದಾಟು ಯೋಜನೆಯ ಡಿಪಿಆರ್‌ ರಚಿಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ನ.30ಕ್ಕೆ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಡಿ.12 ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಜಲ ಆಯೋಗ ನೀಡಿರುವ ಅನುಮತಿಗೆ ತಡೆ ನೀಡಲು ನಿರಾಕರಿಸಿ, ಕರ್ನಾಟಕಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿತ್ತು.