ಚೆನ್ನೈ [ಜು.03] :  ವಿವಾದಿತ ಟಿಕ್ ಟಾಕ್ ಆ್ಯಪ್ ಈಗ ತಮಿಳುನಾಡಿನ ಮಹಿಳೆಗೆ ಮೂರು ವರ್ಷದ ಹಿಂದೆ ವಿಲ್ಲಪುರದಿಂದ ನಾಪತ್ತೆಯಾದ ಪತಿಯನ್ನು ಹುಡುಕಿ ಕೊಟ್ಟಿದೆ. 

ಸುರೇಶ್ ಎಂಬ ವ್ಯಕ್ತಿ 2016ರಲ್ಲಿ ನಾಪತ್ತೆಯಾಗಿದ್ದ. ಆತನ ಪತ್ನಿ ಜಯಪ್ರದಾ ಈ ಬಗ್ಗೆ ದೂರನ್ನು ದಾಖಲಿಸಿದ್ದರು. ಹಲವೆಡೆ ಹುಡುಕಿದರೂ ಕೂಡ ಆತನ ಪತ್ತೆಯಾಗಿರಲಿಲ್ಲ.

ಆದರೆ 3 ವರ್ಷದ ಬಳಿಕ ಟಿಕ್ ಟಾಕ್ ವಿಡಿಯೋದಲ್ಲಿ ಆತನ ಪತ್ತೆಯಾಗಿದೆ. ಜಯಪ್ರದಾ ವಿಡಿಯೋದಲ್ಲಿದ್ದ ವ್ಯಕ್ತಿ ತನ್ನ ಗಂಡನೇ ಎಂದು ತಿಳಿಯುತ್ತಿದ್ದಂತೆ  ವಿಲ್ಲಪುರಮ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಆತನನ್ನು ಹೊಸೂರಿನಲ್ಲಿ ಪತ್ತೆ ಮಾಡಲಾಗಿದೆ.

ಬಳಿಕ ಪೊಲೀಸರು ಆತನ ಪತ್ತೆಗೆ ಇಳಿದಿದ್ದು, ಸುರೇಶ್ ಹೋಸೂರಿಗೆ ತೆರಳಿ ಅಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿಯೇ ತೃತೀಯ ಲಿಂಗಿಯೋರ್ವರ ಜೊತೆ ಸಂಬಂಧ ಹೊಂದಿದ್ದಾಗಿ ತಿಳಿದು ಬಂದಿದೆ.  ಈಕೆಯೊಂದಿಗೆ ಟಿಕ್ ಟಾಕ್ ವಿಡಿಯೋ ಮಾಡಿದ್ದು, ಆತನ ಪತ್ತೆಗೆ ನೆರವಾಗಿದೆ.

ಬಳಿಕ ಪತಿ ಹಾಗೂ ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿ ಮಾತುಕತೆ ನಡೆಸಿದ್ದು,  ಪೊಲೀಸರು ಆತನನ್ನು ಮತ್ತೆ ಜಯಪ್ರದಾ ಜೊತೆಗೆ ಕಳಿಸಲು ಯಶಸ್ವಿಯಾಗಿದ್ದಾರೆ.