ನವದೆಹಲಿ: ಭಾರಿ ಸಾವು-ನೋವುಗಳನ್ನುಂಟು ಮಾಡಿದ ಶತಮಾನದ ಭೀಕರ ಪ್ರವಾಹಕ್ಕೆ ಕೇರಳ ಸರ್ಕಾರ ಈಗ ತಮಿಳುನಾಡು ಸರ್ಕಾರವನ್ನು ಹೊಣೆಯಾಗಿಸಿದೆ. ಮುಲ್ಲಪೆರಿಯಾರ್‌ ಅಣೆಕಟ್ಟಿನ ನೀರಿನ ಮಟ್ಟಇಳಿಕೆಗೆ ತಮಿಳುನಾಡು ಸರ್ಕಾರ ನಿರಾಕರಿಸಿದುದು ಮತ್ತು ಅಣೆಕಟ್ಟಿನಿಂದ ಏಕಾಏಕಿ ನೀರು ಬಿಟ್ಟಿದ್ದೇ ಭೀಕರ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಅಣೆಕಟ್ಟಿನ ನೀರಿನ ಮಟ್ಟವನ್ನು 142 ಅಡಿಯಿಂದ 139 ಅಡಿಗೆ ಇಳಿಸಲು ಸತತವಾಗಿ ಮಾಡಿದ್ದ ಮನವಿಯನ್ನು ತಮಿಳುನಾಡು ಸರ್ಕಾರ ಹೇಗೆ ನಿರಾಕರಿಸಿತು ಎಂಬುದರ ಬಗ್ಗೆ ಕೇರಳ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ. ಅಣೆಕಟ್ಟು ಕೇರಳದಲ್ಲಿದೆಯಾದರೂ, ಅದು ಕೇರಳ ಮತ್ತು ತಮಿಳುನಾಡು ಸರ್ಕಾರಗಳಿಂದ ನಿರ್ವಹಿಸಲ್ಪಡುತ್ತಿದೆ. ಇಡುಕ್ಕಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ, 142 ಅಡಿ ಮಟ್ಟಕ್ಕೆ ನೀರಿನ ಪ್ರಮಾಣ ತಲುಪಿದ್ದ ಅಣೆಕಟ್ಟಿನ ಗೇಟುಗಳನ್ನು ಆ.15ರಂದು ತೆರೆಯಲಾಯಿತು. ಮುಲ್ಲಪೆರಿಯಾರ್‌ ಅಣೆಕಟ್ಟಿನಿಂದ ಹಠಾತ್‌ ನೀರು ಬಿಡುಗಡೆಯಿಂದಾಗಿ, ಇಡುಕ್ಕಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕಾಯಿತು. ಇದೂ ಒಂದು ಭಾರಿ ಪ್ರವಾಹಕ್ಕೆ ಕಾರಣವಾಯಿತು ಎಂದು ತಿಳಿಸಲಾಗಿದೆ.

ಅಣೆಕಟ್ಟಿನಲ್ಲಿ ನೀರು 142 ಅಡಿ ಮಟ್ಟಕ್ಕೆ ತಲುಪಲು ಬಿಡುವುದಕ್ಕೆ ತನ್ನ ಕಾರಣಗಳನ್ನು ತಮಿಳುನಾಡು ಸರ್ಕಾರ ಶುಕ್ರವಾರ ಕೋರ್ಟ್‌ಗೆ ಮಂಡಿಸಲಿದೆ. ಯಾವುದೇ ಮುನ್ಸೂಚನೆ ನೀಡದೆ 44 ಅಣೆಕಟ್ಟುಗಳ ಗೇಟ್‌ಗಳನ್ನು ಒಮ್ಮೆಲೇ ತೆರೆದುದರಿಂದ ಭೀಕರ ಪ್ರವಾಹಕ್ಕೆ ಕಾರಣವಾಯಿತು. ಹೀಗೆ ನೀರುಬಿಟ್ಟರೆ ಯಾವೆಲ್ಲ ಪ್ರದೇಶಗಳು ಮುಳುಗಡೆಯಾಗಲಿವೆ ಎಂಬ ಅರಿವಿಲ್ಲದೆ ಸರ್ಕಾರ ಹೀಗೆ ಮಾಡಿದೆ ಎಂದು ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳು ಆಪಾದಿಸಿದ್ದವು.