ಮದುರೈ[ಆ.03]: ಚಿಕನ್‌ ತಿನಿಸೊಂದಕ್ಕೆ ಬ್ರಾಹ್ಮಣ ಸಮುದಾಯದ ಹೆಸರನ್ನು ನಾಮಕಾರಣ ಮಾಡಿ ಮದುರೈನ ರೆಸ್ಟೋರೆಂಟ್‌ವೊಂದು ವಿವಾದಕ್ಕೆ ಸಿಲುಕಿದೆ.

ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಿತ ಹೆಸರನ್ನು ಕೈಬಿಟ್ಟಿದೆ. ಮದುರೈನ ಹೋಟೆಲ್‌ ಮಿಲಗು, ತಾನು ತಯಾರಿಸುವ ಕೋಳಿ ಮಾಂಸದ ಖಾದ್ಯವೊಂದಕ್ಕೆ ‘ಕುಂಬಕೋಣಂ ಅಯ್ಯರ್‌ ಚಿಕನ್‌’ ಎಂದು ಹೆಸರಿಟ್ಟಿತ್ತು.

ಅಯ್ಯರ್‌ ಎಂಬುದು ಬ್ರಾಹ್ಮಣ ಸಮುದಾಯ. ಮಾಂಸಾಹಾರ ತಿನಿಸಿಗೆ ಸಸ್ಯಾಹಾರಿ ಸಮುದಾಯದ ಹೆಸರಿಟ್ಟಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಸಮುದಾಯದವರು ಹೋಟೆಲ್‌ಗೆ ಹೋಗಿ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ವಿವಾದಿತ ಹೆಸರನ್ನು ಹೋಟೆಲ್‌ ಕೈಬಿಟ್ಟು, ಕ್ಷಮೆ ಯಾಚಿಸಿದೆ.