ಸಾಂದರ್ಭಿಕ ಚಿತ್ರ

ತಿರುಚ್ಚಿ(ಅ.22): ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲ ಧರ್ಮ, ಜಾತಿಗಳೂ ಕಾನೂನಾತ್ಮಕವಾಗಿ ಸಮಾನವಾಗಿವೆ. ಆದರೆ ಸಾಮಾಜಿಕವಾಗಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ತಮಿಳುನಾಡಿನ ತಿರುಚ್ಚಿಯಲ್ಲಿ ಓಂ ಶಕ್ತಿ ಕನ್ಸ್‌ಟ್ರಕ್ಷನ್‌ ಎಂಬ ಕಟ್ಟಡ ನಿರ್ಮಾಣ ಸಂಸ್ಥೆ ಹೊಸದಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಮಾರಾಟಕ್ಕಾಗಿ ಜಾಹೀರಾತು ಬಿಡುಗಡೆ ಮಾಡಿದ್ದು, ಶ್ರೀ ಶಕ್ತಿ ರಂಗ ಅಪಾರ್ಟ್‌ಮೆಂಟ್‌ ಬ್ರಾಹ್ಮಣರಿಗೆ ಮಾತ್ರ ಎಂದು ಉಲ್ಲೇಖಿಸಿದೆ. 

 ಅಪಾರ್ಟ್‌ಮೆಂಟ್‌ ಕೇವಲ ಬ್ರಾಹ್ಮಣರಿಗೆ ಮಾತ್ರ ಎಂಬ ಜಾಹೀರಾತು ಇದೀಗ ವಿವಾದ ಸೃಷ್ಟಿಸಿದ್ದು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡಿನ ಅಸ್ಪೃಶ್ಯತೆ ವಿರೋಧಿ ಸಂಘ (TNUAF) ತಿರುಚ್ಚಿಯ ಜಿಲ್ಲಾಧಿಕಾರಿ ಎಸ್‌. ಶಿವಾರಸು ಅವರಿಗೆ ಅರ್ಜಿ ಸಲ್ಲಿಸಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಸ್ವಚ್ಛತೆ ಕೆಲಸಗಳಿಗೆ ಯಾವ ಸಮುದಾಯದವರನ್ನು ನೇಮಿಸಲಾಗಿದೆ ಎಂಬುದನ್ನು ಅಪಾರ್ಟ್‌ಮೆಂಟ್‌ ಮಾಲೀಕರು ಹೇಳಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ. 

ಇದೇ ವೇಳೆ ಅಪಾರ್ಟ್‌ಮೆಂಟ್‌ ಮಾಲೀಕರು ಈ ಆರೋಪವನ್ನು ನಿರಾಕರಿಸಿದ್ದು, ಸಸ್ಯಾಹಾರಿಗಳಿಗೆ ಮಾತ್ರ ಫ್ಯಾಟ್‌ಗಳನ್ನು ನೀಡಲಾಗುವುದು ಎಂದು ಜಾಹೀರಾತು ನೀಡಲು ಬಯಸಿದ್ದು, ತಪ್ಪು ಮುದ್ರಣದಿಂದ ವಿವಾದ ಸೃಷ್ಟಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.