ಮದುರೈ[ಏ.30]: 100 ವರ್ಷಗಳಿಗಿಂತಲೂ ಹಿಂದೆ ಅಂದರೆ, 1915ರಲ್ಲಿ ಮದುರೈನ ಮೇಲೂರಿನಲ್ಲಿರುವ ದೇವಾಲಯವೊಂದರಿಂದ ಕಾಣೆಯಾಗಿದ್ದ, ಬ್ರಿಟಿಷರು ಎಷ್ಟೇ ಹುಡುಕಾಡಿದರೂ ಪತ್ತೆ ಹಚ್ಚಲು ಆಗದಿದ್ದ, 700 ವರ್ಷಗಳಷ್ಟುಪುರಾತನ ದೇವರ ಮೂರ್ತಿಯೊಂದು ಹಳೆಯ ಮನೆಯೊಂದರ ಗೋಡೆಯಲ್ಲಿ ಇದೀಗ ಪತ್ತೆಯಾಗಿದೆ!

ಸುಮಾರು 800 ವರ್ಷಗಳಷ್ಟುಇತಿಹಾಸ ಹೊಂದಿರುವ ಮದುರೈನ ನಾಗೈಕಡೈ ಓಣಿಯ ದೇಗುಲದಿಂದ ಈ ವಿಗ್ರಹ ಕಳವಾಗಿತ್ತು. 1915ರಲ್ಲಿ ದೇಗುಲದಲ್ಲಿದ್ದ ಇಬ್ಬರು ಅರ್ಚಕರ ಪೈಕಿ ಒಬ್ಬರಾಗಿದ್ದ ಕರುಪ್ಪಸ್ವಾಮಿ ಎನ್ನುವವರು 1.5 ಅಡಿ ಎತ್ತರದ ದ್ರೌಪದಿ ಅಮ್ಮನವರ ಪ್ರತಿಮೆಯನ್ನು ಕಳವು ಮಾಡಿ ತಮ್ಮ ಮನೆಯ ಗೋಡೆಯೊಳಗೆ ಹುದುಗಿಸಿಟ್ಟಿದ್ದರು. ಕರುಪ್ಪಸ್ವಾಮಿ ಮೊಮ್ಮಗ ಮುರುಗೇಶನ್‌ (60) ಎಂಬುವರು ನೀಡಿದ ಸುಳಿವಿನ ಮೇರೆಗೆ ಈ ವಿಗ್ರಹವನ್ನು ಇದೀಗ ಪೊಲೀಸರು ವಶಪಡಿಸಿಕೊಂಡು ದೇಗುಲಕ್ಕೆ ಹಸ್ತಾಂತರಿಸಿದ್ದಾರೆ.

ಪತ್ತೆ ಆಗಿದ್ದು ಹೇಗೆ?:

ಕರುಪ್ಪಸ್ವಾಮಿ ಅವರ ಮೊಮ್ಮಗ ಮುರುಗೇಶನ್‌ ಆರು ತಿಂಗಳ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮ ಕುಟುಂಬದ ರಹಸ್ಯವೊಂದನ್ನು ಬಾಯಿಬಿಟ್ಟಿದ್ದರು. ದೇವಿಯ ಶಾಪದಿಂದಾಗಿ ತಮ್ಮ ಕುಟುಂಬದಲ್ಲಿ ಹಲವು ಮಂದಿ ಸಾವಿಗೀಡಾಗಿದ್ದಾರೆ. ತಮ್ಮ ಅನಾರೋಗ್ಯಕ್ಕೂ ದೇವಿಯ ಶಾಪವೇ ಕಾರಣ. ತಾನು ಚಿಕ್ಕವನಿದ್ದಾಗ ತಮ್ಮ ಅಜ್ಜ ಹಳೆಯ ಮನೆಯಲ್ಲಿ ಗೋಡೆಗೆ ಪೂಜೆ ಮಾಡುತ್ತಿದ್ದುದನ್ನು ನೋಡಿದ್ದೇನೆ. ಹೀಗಾಗಿ ಅಲ್ಲಿ ಕಾಣೆಯಾದ ದೇವರ ಮೂರ್ತಿ ಇದ್ದಿರಬಹುದು ಎಂದು ಅರ್ಚಕರ ಮುಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ಸಿಬ್ಬಂದಿ ನೀಡಿದ ದೂರು ಆಧರಿಸಿ ಪೊಲೀಸರು ಮನೆಯ ಗೋಡೆಯನ್ನು ಕೆಡವಿದಾಗ ದೇವರ ಮೂರ್ತಿ ಪತ್ತೆಯಾಗಿದೆ.

ಮತ್ತೊಬ್ಬ ಅರ್ಚಕನ ಜತೆ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ದೇವರ ಮೂರ್ತಿಯನ್ನು ಕರುಪ್ಪಸ್ವಾಮಿ 1915ರಲ್ಲಿ ಒಯ್ದಿದ್ದರು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಬ್ರಿಟಿಷ್‌ ಪೊಲೀಸರು ಮನೆಯನ್ನು ತಪಾಸಣೆ ಮಾಡಿದ ವೇಳೆ ಮೂರ್ತಿ ಪತ್ತೆ ಆಗದ ಹಿನ್ನೆಲೆಯಲ್ಲಿ ವಾಪಸ್‌ ಆಗಿದ್ದರು. ಆದರೆ, ಕರುಪ್ಪಸ್ವಾಮಿ ಗೋಡೆಯನ್ನು ಕೊರೆದು ಅದರ ಒಳಗೆ ಮೂರ್ತಿಯನ್ನು ಇಟ್ಟು ಪ್ಲಾಸ್ಟರಿಂಗ್‌ ಮಾಡಿದ್ದರು. ಹೀಗಾಗಿ ಮೂರ್ತಿ ಇದ್ದ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ ಎಂದು ದೇವರ ಮೂರ್ತಿಗಳ ಕಳವಾದ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್‌ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

- ಸರಿಸುಮಾರು 104 ವರ್ಷ ಹಿಂದೆ ಮದುರೈನ ಮೇಲೂರು ದ್ರೌಪದಿ ಅಮ್ಮಾಳ್‌ ದೇಗುಲದ ವಿಗ್ರಹ ಕಳವು

- ಮತ್ತೊಬ್ಬ ಅರ್ಚಕ ಜತೆ ಮನಸ್ತಾಪ ಉಂಟಾದ್ದರಿಂದ ವಿಗ್ರಹವನ್ನೇ ಹೊತ್ತೊಯ್ದಿದ್ದ ಅರ್ಚಕ ಕರುಪ್ಪಸ್ವಾಮಿ

- 1915ರಲ್ಲೇ ಈ ಬಗ್ಗೆ ದೂರು ದಾಖಲಾಗಿತ್ತು. ಬ್ರಿಟಿಷ್‌ ಪೊಲೀಸರು ಹುಡುಕಾಡಿದ್ದರೂ ವಿಗ್ರಹ ಸಿಕ್ಕಿರಲಿಲ್ಲ

- ದೇವಿ ಶಾಪದಿಂದ ಕುಟುಂಬದಲ್ಲಿ ಹಲವು ಸಾವು ಆಗಿದೆ ಎಂದು ಇತ್ತೀಚೆಗೆ ಕರುಪ್ಪಸ್ವಾಮಿ ಮೊಮ್ಮಗ ಹೇಳಿಕೆ

- ಅಲ್ಲದೆ, ಮನೆ ಗೋಡೆಗೆ ಅಜ್ಜ ಪೂಜೆ ಮಾಡುತ್ತಿದ್ದರು. ಅಲ್ಲಿ ವಿಗ್ರಹ ಇರಬಹುದು ಎಂದಿದ್ದ ಮೊಮ್ಮಗ

- ಇದನ್ನು ಆಧರಿಸಿ ಮನೆಯ ಗೋಡೆಯನ್ನು ಒಡೆದಾಗ ಶತಮಾನದ ಹಿಂದೆ ಕಾಣೆಯಾಗಿದ್ದ ವಿಗ್ರಹ ಪತ್ತೆ