ಕಾವೇರಿಗಾಗಿ ಕನ್ನಡಿಗರ ಹೃದಯ ತಟ್ಟಿದ ತಮಿಳು ನಟ

Tamil actor Simbu reacts on the Cauvery issue in unique way
Highlights

ಸಾಮಾನ್ಯವಾಗಿ ಕಾವೇರಿ ವಿಷಯವಾಗಿ ಒಂದಾಗುವ ಕಾಲಿವುಡ್ ನಟರು, ಕನ್ನಡಿಗರು ಹಾಗೂ ಕರುನಾಡ ವಿರುದ್ಧವಾಗಿಯೇ ಮಾತನಾಡುವುದು ಸಹಜ. ಇದಕ್ಕೆ ಅಪವಾದವೆಂಬಂತೆ ಕಾಲಿವುಡ್ ನಟ ಶಿಂಬು ಕನ್ನಡಿಗರ ಪರ ಬ್ಯಾಟಿಂಗ್ ಮಾಡಿ, ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚೆನ್ನೈ: ಕಾವೇರಿ ನೀರಿಗಾಗಿ ತಮಿಳರು ಹಾಗೂ ಕನ್ನಡಿಗರ ನಡುವೆ ಹೋರಾಟ ನಡೆಯುವುದು ಹೊಸತೇನಲ್ಲ. ಬಹಳ ಸಾರಿ ಇದು ವೋಟ್ ಬ್ಯಾಂಕ್ ರಾಜಕಾರಣಕ್ಕೂ ಬಳಕೆಯಾಗುತ್ತದೆ. 

ಸಾಮಾನ್ಯವಾಗಿ ಕಾವೇರಿ ವಿಷಯವಾಗಿ ಒಂದಾಗುವ ಕಾಲಿವುಡ್ ನಟರು, ಕನ್ನಡಿಗರು ಹಾಗೂ ಕರುನಾಡ ವಿರುದ್ಧವಾಗಿಯೇ ಮಾತನಾಡುವುದು ಸಹಜ. ಇದಕ್ಕೆ ಅಪವಾದವೆಂಬಂತೆ ಕಾಲಿವುಡ್ ನಟ ಶಿಂಬು ಕನ್ನಡಿಗರ ಪರ ಬ್ಯಾಟಿಂಗ್ ಮಾಡಿ, ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾಷಣದಲ್ಲಿ ಶಿಂಬು ಹೇಳಿದ್ದೇನು?
'ಕರ್ನಾಟಕದಲ್ಲಿ ಹುಟ್ಟಿಲ್ಲವಾದರೂ ಕನ್ನಡ ತಾಯಿಯ ಮಗನಾಗಿ ಮಾತನಾಡುತ್ತಿದ್ದೇನೆ. ಕನ್ನಡ ತಾಯಿ ಬಳಿ ನಿಮ್ಮ ಮಕ್ಕಳು ಬಳಸಿ ಮಿಕ್ಕಿರುವ ನೀರನ್ನು ಕೊಡಿ ಎಂದು ಕೇಳುತ್ತಿದ್ದೇನೆ. ಆತ್ಮೀಯ ಕನ್ನಡಿಗರೇ, ನೀವೊಂದು ಲೋಟ ನೀರು ತೆಗೆದು ಒಬ್ಬ ತಮಿಳಿಗನಿಗೆ ನೀಡಿ. ತಮಿಳಿಗನಿಗೆ ನೀರು ಕೊಡುವ ವೀಡಿಯೋ ಮಾಡಿ ಕಳುಹಿಸಿ,' ಎಂದು ಕರೆ ನೀಡಿದ್ದಾರೆ.

ಏನಿದು ವೀಡಿಯೋ?
'ಏ.11ರ ಬುಧವಾರ ಸಂಜೆ 6 ಗಂಟೆಯೊಳಗೆ ವಿಡಿಯೋ ಕಳಿಸಿ. ಕರ್ನಾಟಕದಲ್ಲಿರುವ ನನ್ನ ತಾಯಂದಿರು, ಸಹೋದರರು, ಸಹೋದರಿಯರು. ಬಂಧು ಬಳಗದವರೇ, ಆತ್ಮೀಯ ಕನ್ನಡಿಗರೇ ನೀವೊಂದು ಲೋಟ ನೀರು ತೆಗೆದು ಒಬ್ಬ ತಮಿಳಿಗನಿಗೆ ನೀಡಿ. ಅದನ್ನು ವೀಡಿಯೋ ಮಾಡಿ ಕಳುಹಿಸಿ. ಹಾಗೇ ಮಾಡಲಿಲ್ಲವೋ ನಿಮಗೆ ನೀರು ಕೊಡಲು ಇಷ್ಟವಿಲ್ಲವೆಂದು ನಾವೇ ತಿಳಿದುಕೊಳ್ಳುತ್ತೇವೆ. ನಮಗೆ ಈ ರಾಜಕೀಯ ಬೇಡ,' ಎಂದು ಹೇಳಿದ್ದಾರೆ.

ನೀರಿಗಾಗಿ ರಾಜಕೀಯ ಸಲ್ಲದು..
'ತಮಿಳುನಾಡಿನಲ್ಲಿ ಕಾವೇರಿ ಕಾವು ಹೆಚ್ಚಾಗಿದ್ದು, ಈ ಅವಕಾಶವನ್ನು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇನ್ನು ತಮಿಳು ಚಿತ್ರರಂಗದ ಗಣ್ಯರು ಕಾವೇರಿಯನ್ನು ಬೆಂಬಲಿಸಿ, ಮೌನವಾಗಿಯೂ ಪ್ರತಿಭಟಿಸಿದರು. ಇದಕ್ಕೆ ಶಿಂಬು ಏನು ಹೇಳ್ತಾರೆ ಗೊತ್ತಾ?

'ಜಾತಿ, ಮತ, ಸ್ಥಳ ಹೀಗೆ ಹಲವು ಕಾರಣ ಹೇಳಿ, ಮನುಷ್ಯರನ್ನು ಒಡೆಯುವ ಕಾರ್ಯವಾಗುತ್ತದೆ. ನಾನಿಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆಯಾಗಲಿ, ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆಯಾಗಲಿ ಮಾತನಾಡಲು ಬಂದಿಲ್ಲ. ನೀರು ಬೇಕೆಂದು ಇಷ್ಟೆಲ್ಲಾ ಮಾತನಾಡುತ್ತೇವೆ, ಆದರೆ ನಮ್ಮಲ್ಲಿ ಮಳೆ ಬಂದು ಮನೆಗಳೆಲ್ಲಾ ನೀರಲ್ಲಿ ಮುಳುಗಿದಾಗ ಆ ಬಗ್ಗೆ ಯಾರೂ ಮಾತನಾಡಲಿಲ್ಲವೇಕೆ?ಎಂದು ಪ್ರಶ್ನಿಸಿದ್ದಾರೆ.

ಮನುಷ್ಯರನ್ನು ಹಲವಾರು ಕಾರಣಗಳಿಂದ ಪ್ರತ್ಯೇಕಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. #UniteForHumanity ಎಂದು ಸಾಮಾಜಿಕ ತಾಣದಲ್ಲಿ ಬರೆದು ಹೋರಾಟ ನಡೆಸೋಣ. ಮಾನವೀಯತೆ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದ್ದಾರೆ.
 

loader