ಜಗತ್ಪ್ರಸಿದ್ಧ ತಾಜ್ ಮಹಲನ್ನು ಉತ್ತರ ಪ್ರದೇಶದ ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ: ಜಗತ್ಪ್ರಸಿದ್ಧ ತಾಜ್ ಮಹಲನ್ನು ಉತ್ತರ ಪ್ರದೇಶದ ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಸಮರ್ಥಿಸುವ ಭರದಲ್ಲಿ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ತಾಜ್ ಮಹಲನ್ನು ಕಟ್ಟಿರುವುದು ದೇಶದ್ರೋಹಿಗಳು ಎಂದಿರುವ ಉತ್ತರ ಪ್ರದೇಶ ಶಾಸಕ ಸಂಗೀತ್ ಸೋಮ್, ಅದು ಭಾರತೀಯ ಸಂಸ್ಕೃತಿ ಮೇಲಿನ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದ್ದಾರೆ.

ಪ್ರವಾಸಿ ತಾಣಗಳ ಪಟ್ಟಿಯಿಂದ ತಾಜ್ ಮಹಲನ್ನು ಕೈಬಿಟ್ಟಿರುವುದರಲ್ಲಿ ದುಖ: ಪಡುವಂಥದ್ದೇನಿದೆ ಎಂದು ಕೇಳಿರುವ ಸಂಗೀತ್ ಸೋಮ್, ಅದನ್ನು ನಿರ್ಮಿಸಿದವರು ಹಿಂದೂಗಳನ್ನು ಅಳಿಸಿ ಹಾಕಬಯಸಿದ್ದರು ಎಂದು ಮುಜಫ್ಫರ್ ನಗರ ಗಲಭೆಯಲ್ಲಿ ಆರೋಪಿಯಾಗಿರುವ ಸೋಮ್ ಹೇಳಿದ್ದಾರೆ.

ಮುಂದುವರಿದು, ಅಂತಹ ವ್ಯಕ್ತಿಗಳು (ಮೊಘಲರು) ನಮ್ಮ ದೇಶದ ತಿಹಾಸದ ಭಾಗವಾಗಿದ್ದಾರೆಂದಾದರೆ, ನಾವು ಇತಿಹಾಸವನ್ನೇ ಬದಲಾಯಿಸುತ್ತೇವೆ, ಎಂದು ಹೇಳಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ತಾಜ್ ಮಹಲನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟಿದ್ದು ದೇಶಾದ್ಯಂತ ಟೀಕೆ ವ್ಯಕ್ತವಾಗಿತ್ತು.