ರಾಜ್ಯದಲ್ಲಿ ಇನ್ನು ಮುಂದೆ ತಂಬಾಕು ಬಳಕೆಗೆ ಮತ್ತೆ ಅವಕಾಶ ಲಭಿಸಿದೆ. ಆದರೆ ಅದು ಬರೀ ಶುದ್ಧ ತಂಬಾಕು ಉತ್ಪನ್ನ ಆಗಿರಬೇಕಷ್ಟೆ. ಗುಟ್ಕಾ, ಪಾನ್ ಮಸಾಲ ಜತೆ ತಂಬಾಕು ಸೇರಿಸಿ (ಮಿಕ್ಸ್ ಮಾಡಿ) ಉತ್ಪಾದನೆ, ಮಾರಾಟ ಮಾಡುವಂತಿಲ್ಲ. ಅದರ ಮೇಲಿನ ನಿಷೇಧ ಈಗಿರುವಂತೆ ಮುಂದುವರೆಯಲಿದೆ.
ಬೆಂಗಳೂರು (ಮೇ.07): ರಾಜ್ಯದಲ್ಲಿ ಇನ್ನು ಮುಂದೆ ತಂಬಾಕು ಬಳಕೆಗೆ ಮತ್ತೆ ಅವಕಾಶ ಲಭಿಸಿದೆ. ಆದರೆ ಅದು ಬರೀ ಶುದ್ಧ ತಂಬಾಕು ಉತ್ಪನ್ನ ಆಗಿರಬೇಕಷ್ಟೆ. ಗುಟ್ಕಾ, ಪಾನ್ ಮಸಾಲ ಜತೆ ತಂಬಾಕು ಸೇರಿಸಿ (ಮಿಕ್ಸ್ ಮಾಡಿ) ಉತ್ಪಾದನೆ, ಮಾರಾಟ ಮಾಡುವಂತಿಲ್ಲ. ಅದರ ಮೇಲಿನ ನಿಷೇಧ ಈಗಿರುವಂತೆ ಮುಂದುವರೆಯಲಿದೆ.
ಈ ಕುರಿತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಹೊಸ ತಿದ್ದುಪಡಿ ನಿಯಮಗಳನ್ನು ಪ್ರಕಟಿಸಿದೆ. ಅದರ ಪ್ರಕಾರ ತಂಬಾಕು ಉತ್ಪನ್ನ ಮಾರಾಟ ಮತ್ತು ತಂಬಾಕು ಬೆಳೆಗೆ ಯಾವುದೇ ನಿಷೇಧವಿಲ್ಲ ಎಂದು ಹೇಳಿದೆ. ಆದರೆ ತಂಬಾಕನ್ನು ಏನಾದರೂ ತಿನಿಸುಗಳಲ್ಲಿ ಸೇರಿಸಿ ಮಾರಾಟ ಮಾಡಿದರೆ ಶಿಕ್ಷೆ ಖಚಿತ. ಅಂದರೆ, ತಂಬಾಕು ಅಂಶ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಗಳಿಗೆ ಕಟ್ಟುನಿಟ್ಟಿನ ನಿಷೇಧವಿದೆ ಎಂದು ಹೊಸ ನಿಯಮಗಳಲ್ಲಿ ಸ್ಪಷ್ಟಪಡಿಸಿದೆ. ಈ ಮೂಲಕ 2016 ರಲ್ಲಿ ಸರ್ಕಾರ ಹೊರಡಿಸಿದ್ದ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ಅಧಿಸೂಚನೆ ಹೊರಡಿಸಿದೆ.
ಸರ್ಕಾರ 2016 ರಲ್ಲಿ ಹೊರಡಿಸಿದ್ದ ನಿಯಮಗಳಲ್ಲಿ ಜಗಿಯುವ ತಂಬಾಕು ಮತ್ತು ತಂಬಾಕು ಉತ್ಪಾದಿಸುವ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ರಾಜ್ಯದಲ್ಲಿ ತಂಬಾಕು ನಿಷೇಧ ಮತ್ತು ತಂಬಾಕು ತಯಾರಿಕೆ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ವಿಚಾರ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವವರೆಗೂ ಸರ್ಕಾರ ನಿಯಮ ರೂಪಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ ತಂಬಾಕು ನಿಷೇಧ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದೆ.
ಈ ಬಗ್ಗೆ ಕಾನೂನು ಇಲಾಖೆ ಮತ್ತು ಆಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನೂ ಪಡೆದು ತಂಬಾಕು ನಿಷೇಧವನ್ನು ವಾಪಸ್ ತೆಗೆದುಕೊಂಡಿದೆ. ಆದರೆ ತಂಬಾಕನ್ನು ಯಾವುದಾದರೂ ಆಹಾರ ಪದಾರ್ಥಕ್ಕೆ ಸೇರಿಸಿ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಹೊಸ ನಿಯಮ ಪ್ರಕಟಿಸಲಾಗಿದೆ. ಆಹಾರ ಪದಾರ್ಥಗಳಲ್ಲಿ ತಂಬಾಕು ಸೇರಿಸಿ ಮಾರಾಟ ಮಾಡಿದರೆ ಆಹಾರ ಸುರಕ್ಷತಾ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು ಎಂದು ಹೊಸ ಆದೇಶದಲ್ಲಿ ಹೇಳಲಾಗಿದೆ.
ಆದರೆ ಬರೀ ತಂಬಾಕು ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಕಾಟ್ಪ ಎನ್ನುವ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದಾಗಿದೆ. ಅಂದರೆ ಆರೋಗ್ಯ ಕೇಂದ್ರ, ಶಾಲಾ, ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಂಬಾಕು ವಿಚಾರ ಸುಪ್ರೀಂಕೋರ್ಟ್‌ನಲ್ಲಿರುವ ಕಾರಣ ಹಿಂದಿನ ನಿಯಮಕ್ಕೆ ಸಣ್ಣಪುಟ್ಟ ತಿದ್ದುಪಡಿ ತರಲಾಗಿದೆ. ಆದರೆ ಆಹಾರ ಉತ್ಪನಗಳಲ್ಲಿ ತಂಬಾಕು ಸೇರಿಸಿ ಮಾರಾಟ ಮಾಡಿದರೆ ಸರ್ಕಾರ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತದೆ. ಉಳಿದಂತೆ ಹಿಂದಿನ ಆದೇಶ ಚಾಲ್ತಿಯಲ್ಲಿದೆ. ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
- ಶಾಲಿನಿ ರಜನೀಶ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ
