ಕೋಲ್ಕತ್ತಾ[ಜೂ.22]: ಪಶ್ಚಿಮ ಬಂಗಾಳದ ತಾರಕೇಶ್ವರ ದೇವಸ್ಥಾನ ಮಂಡಳಿಯ ಅಧ್ಯಕ್ಷರನ್ನು ಬದಲಾಯಿಸಿದ ಬೆನ್ನಲ್ಲೇ, ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಕೊಂಡಾಡಿದ್ದಾರೆ.

ಹೌದು ಕಳೆದ ನಾಲ್ಕು ದಿನಗಳ ಹಿಂದೆ ಪಶ್ಚಿಮ ಬಂಗಳದ ಸಿಎಂ, ಅಲ್ಲಿನ ತಾರಕೇಶ್ವರ ದೇವಸ್ಥಾನ ಅಭಿವೃದ್ಧಿ ಮಂಡಳಿಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಫಿರ್ಹಾದ್ ಹಕೀಂರನ್ನು ಕೆಳಗಿಳಿಸಿದ್ದರು. ಅಲ್ಲದೇ ಸ್ಥಾನಕ್ಕೆ ಮಾಜಿ ಸಂಸದ ಡಾ. ರತ್ನ ಡೀ ನಾಗ್‌ರನ್ನು ನೇಮಿಸಲಾಗಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಕೊಟ್ಟ ಮಾತಿನ್ನು ಉಳಿಸಿಕೊಂಡ ಸಿಎಂ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ 'ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಂ ರಾಜೀನಾಮೆ ನೀಡಿದ್ದು, ಮಡಾ. ಡಾ. ರತ್ನ ಡಿ ನಾಗ್ ಪಶ್ಚಿಮ ಬಂಗಾಳದ ತಾರಕೇಶ್ವರ ದೇವಸ್ಥಾನದ ಅಭಿವೃದ್ಧಿ ಮಂಡಳಿಯ ನೂತನ ಚೇರ್ಮನ್‌ ಆಗಿ ನೇಮಕಗೊಂಡಿದ್ದಾರೆ. ಈ ಅಸಾಮಾನ್ಯ ನಡೆಯ ಮೂಲಕ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಹಿಂದೂಗಳಿಗಾಗಿ ತಾರಕೇಶ್ವರ ದೇವಸ್ಥಾನ ಮಂಡಳಿಯಲ್ಲಿ ಬದಲಾವಣೆ ಆಗಲೇಬೇಕು ಎಂದು ಈ ಹಿಂದೆ ನಾನು ವಾದಿಸಿದ್ದೆ. ಆಗ ಸಿಎಂ ಮಮತಾ ಬ್ಯಾನರ್ಜಿ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೀಗ 8 ತಿಂಗಳ ಬಳಿಕ ತಾವು ಕೊಟ್ಟ ಭರವಸೆಯನ್ನು ಮರೆಯದೆ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ' ಎಂದಿದ್ದಾರೆ.

ಮಮತಾ ಬ್ಯಾನರ್ಜಿ ತಮ್ಮ ಆತ್ಮೀಯರಲ್ಲೊಬ್ಬರಾದ ಫಿರ್ಹಾದ್ ಹಕೀಂರನ್ನು ತಾರಕೇಶ್ವರ ದೇವಸ್ಥಾನ ಅಭಿವೃದ್ಧಿ ಮಂಡಳಿಯ ಚೇರ್ಮನ್ ಆಗಿ ನೇಮಿಸಿದಾಗ ಅವರ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಮರನ್ನು ಓಲೈಸುವ ಸಲುವಾಗಿ ಮಮತಾ ಬ್ಯಾನರ್ಜಿ ಹಕೀಂರನ್ನು ಚೇರ್ಮನ್ ಆಗಿ ನೇಮಿಸಿ ರಾಜಕೀಯ ಮಾಡುತ್ತಿದ್ದಾರೆ' ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.