Asianet Suvarna News Asianet Suvarna News

ವಿವೇಕಾನಂದರ ಸಶಕ್ತ ಭಾರತದ ಕನಸು ನನಸಾಗಿದೆಯಾ?

ಐದು ಸಾವಿರ ವರ್ಷಗಳಿಗೂ ಮಿಗಿಲಾದ ಭವ್ಯ ಇತಿಹಾಸ, ದಿವ್ಯ ಸಂಸ್ಕೃತಿ, ಮಹೋನ್ನತ ಪರಂಪರೆಗಳುಳ್ಳ ದೇಶ ನಮ್ಮದು. ಇಲ್ಲಿ ಪ್ರಾಚೀನ, ಅರ್ವಾಚೀನ ಮಹಾಪುರುಷರು, ಸಂತರು, ದಾರ್ಶನಿಕರು, ಆಧ್ಯಾತ್ಮ ವೀರರು, ಜ್ಞಾನಿಗಳು ನಿರಂತರವಾಗಿ ಚೈತನ್ಯ ತುಂಬುತ್ತ ಬಂದಿದ್ದಾರೆ. ಇವರೆಲ್ಲರೂ ಸರ್ವರ ಸುಖಕ್ಕಾಗಿ, ಸರ್ವರ ಏಳಿಗೆಗಾಗಿ ಮನುಷ್ಯ ಮನಸ್ಸುಗಳನ್ನು ಜಾಗೃತಿಗೊಳಿಸಿ ಹದವಾದ ಪಾಕಕ್ಕೆ ತರುವುದರಲ್ಲೇ ತಮ್ಮ ಆಯುಷ್ಯ ತೆತ್ತವರು. ಅಲ್ಪಾಯುಷ್ಯದಲ್ಲೇ ಅಗಾಧವಾದ ಸಾಧನೆಗೈದು ದೇಶಕ್ಕೆ ಮುಂಬೆಳಕು ನೀಡಿದವರು. ಇವರಲ್ಲಿ ಅಧ್ಯಾತ್ಮವೀರರಾಗಿ, ಜ್ಞಾನ ಸೂರ್ಯರಾಗಿ, ವಿವೇಕ ಪ್ರಭೆಯಾಗಿ ವಿಶ್ವದೆತ್ತರಕ್ಕೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ  ಕೀರ್ತಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.

Swami Vivekananda Jayanthi Today

ಬೆಂಗಳೂರು (ಜ.12): ಐದು ಸಾವಿರ ವರ್ಷಗಳಿಗೂ ಮಿಗಿಲಾದ ಭವ್ಯ ಇತಿಹಾಸ, ದಿವ್ಯ ಸಂಸ್ಕೃತಿ, ಮಹೋನ್ನತ ಪರಂಪರೆಗಳುಳ್ಳ ದೇಶ ನಮ್ಮದು. ಇಲ್ಲಿ ಪ್ರಾಚೀನ, ಅರ್ವಾಚೀನ ಮಹಾಪುರುಷರು, ಸಂತರು, ದಾರ್ಶನಿಕರು, ಆಧ್ಯಾತ್ಮ ವೀರರು, ಜ್ಞಾನಿಗಳು ನಿರಂತರವಾಗಿ ಚೈತನ್ಯ ತುಂಬುತ್ತ ಬಂದಿದ್ದಾರೆ. ಇವರೆಲ್ಲರೂ ಸರ್ವರ ಸುಖಕ್ಕಾಗಿ, ಸರ್ವರ ಏಳಿಗೆಗಾಗಿ ಮನುಷ್ಯ ಮನಸ್ಸುಗಳನ್ನು ಜಾಗೃತಿಗೊಳಿಸಿ ಹದವಾದ ಪಾಕಕ್ಕೆ ತರುವುದರಲ್ಲೇ ತಮ್ಮ ಆಯುಷ್ಯ ತೆತ್ತವರು. ಅಲ್ಪಾಯುಷ್ಯದಲ್ಲೇ ಅಗಾಧವಾದ ಸಾಧನೆಗೈದು ದೇಶಕ್ಕೆ ಮುಂಬೆಳಕು ನೀಡಿದವರು. ಇವರಲ್ಲಿ ಅಧ್ಯಾತ್ಮವೀರರಾಗಿ, ಜ್ಞಾನ ಸೂರ್ಯರಾಗಿ, ವಿವೇಕ ಪ್ರಭೆಯಾಗಿ ವಿಶ್ವದೆತ್ತರಕ್ಕೂ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ  ಕೀರ್ತಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.

ಯುವಜನರ ಸ್ಫೂರ್ತಿ ‘ನೀನು ಭಾರತವನ್ನು ತಿಳಿದುಕೊಳ್ಳಬೇಕೆಂದರೆ, ಮೊದಲು ವಿವೇಕಾನಂದರನ್ನು ಕುರಿತು ಅಧ್ಯಯನ ಮಾಡು’ ಇದು ರವೀಂದ್ರನಾಥ ಟ್ಯಾಗೂರ್ ಅವರ ಮಾತು. ಅಕ್ಷರಶಃ ನಿಜ. ಏಕೆಂದರೆ ವಿವೇಕಾನಂದರು ಭಾರತಾಂಬೆಯ ಸುಪುತ್ರರಾಗಿ ಭಾರತದ ಸಂಸ್ಕೃತಿ ಸಂಪನ್ನತೆಯ ಮೌಲ್ಯವನ್ನೆಲ್ಲಾ ತಮ್ಮೊಳಗೆ ಮೇಳೈಸಿಕೊಂಡು ಒಂದು ರೀತಿ ಇಡೀ ಭಾರತವೇ ಅವರಾಗಿದ್ದರು. ಅಲ್ಲಿ ಭಾರತದ ವಿರಾಟ್ ದರ್ಶನವಿತ್ತು! ವಿವೇಕಾನಂದರೆಂದರೆ ಒಳಿತಿನ ಹೊಳಪು. ಸಂಸ್ಕೃತಿಯ  ಮಹಾಬೆಳಕು. ‘ನಮಗಿಂದು ಶಕ್ತಿ, ಶಕ್ತಿಬೇಕು ಎಂದು ಪದೇ ಪದೇ ಹೇಳುವೆನು. ಉಪನಿಷತ್ತುಗಳು ಶಕ್ತಿಯ ಮಹಾಗಣಿ. ಪ್ರಪಂಚಕ್ಕೆಲ್ಲಾ ದಾನ ಮಾಡುವಷ್ಟು ಶಕ್ತಿ ಅದರಲ್ಲಿದೆ. ಇಡೀ ಪ್ರಪಂಚವನ್ನೇ ಅದರಿಂದ ಜಾಗೃತಗೊಳಿಸಬಹುದು. ಇಡೀ ಪ್ರಪಂಚಕ್ಕೆ ಶಕ್ತಿಯನ್ನು ನೀಡಬಹುದು’ ಎಂದು ಸಾರಿದ ಸ್ವಾಮಿ ವಿವೇಕಾನಂದರು ವಿಶೇಷವಾಗಿ ಭಾರತದ ಘನತೆ, ಗೌರವ, ಆಶೋತ್ತರ, ಭವಿಷ್ಯಗಳೆಲ್ಲವೂ ದೇಶದ ಯುವಶಕ್ತಿಯ ಕೈನಲ್ಲಿದೆಯೆಂದೂ, ರಾಷ್ಟ್ರನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಮಹತ್ತರವಾದುದೆಂದೂ, ಸತ್ತಂತಿಹ ಯುವ ಶಕ್ತಿಯನ್ನು ಬಡಿದೆಚ್ಚರಿಸಿದ ಭವ್ಯ ತೇಜರು. ನೇತಾಜಿ ಸುಭಾಷ್ ಚಂದ್ರಬೋಸ್‌'ರಂತಹ ಸ್ವಾತಂತ್ರ್ಯ ಸೇನಾನಿಗಳಿಗೇ ಆಧ್ಯಾ ತ್ಮಿಕ ಗುರುವಾಗಿದ್ದವರು. ಯುವಜನರಿಗೆ ಸದಾ ಸ್ಫೂರ್ತಿದಾಯಕರು.

ಏಳಿ, ಎದ್ದೇಳಿ.. ‘ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ. ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳು’ ಎಂದು ಕರೆನೀಡಿದ ಈ ವಿವೇಕವಾಣಿಯೇ ವಿವೇಕಾನಂದರನ್ನು ಬೇರೆಲ್ಲರಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ. ಹಾಗೆಯೇ ಜನರಲ್ಲಿ ಅದರಲ್ಲೂ ಯುವಜನರಲ್ಲಿ ಸ್ಫೂರ್ತಿಯ ಸೆಲೆಯಾಗಿ ಉತ್ಸಾಹ ತುಂಬಿ ನವ ಚೈತನ್ಯ ತರುತ್ತದೆ. ಅರಿವವರಿಗೆ ಅವರ ಈ ಮಾತುಗಳೇ ಸಾಕು ಸಾಧನೆಯ ಶಿಖರವನ್ನೇ ಏರಬಹುದು. ಆದ್ದರಿಂದಲೇ ಯುವಶಕ್ತಿಯ ಸಾಧನೆಯ ಸಂಕೇತದಂತಿರುವ ವಿವೇಕಾನಂದರ ಜನ್ಮದಿನವಾದ ಜನವರಿ 12 ನ್ನು ಅರ್ಥಾತ್ ವಿವೇಕಾನಂದ ಜಯಂತಿಯನ್ನು ‘ರಾಷ್ಟ್ರೀಯ ಯುವ ದಿನ’ವಾಗಿ ದೇಶ ಹೆಮ್ಮೆಯಿಂದ ಆಚರಿಸುತ್ತದೆ. ಈ ರಾಷ್ಟ್ರೀಯ ಯುವದಿನಾಚರಣೆ ನಿಜಕ್ಕೂ ಸಾರ್ಥಕವಾಗಬೇಕಾದರೆ ವಿವೇಕಾನಂದರ  ಚಿಂತನೆಗಳನ್ನು ಪ್ರತಿಯೊಬ್ಬರೂ ಅದರಲ್ಲೂ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು. ವಿವೇಕಾನಂದರು ನಿರೀಕ್ಷಿಸಿದ್ದ ಭಾರತೀಯರು ನಾವಾಗಬೇಕು. ಅವರು ಆಶಿಸಿದ್ದ ಸಶಕ್ತ ಭವ್ಯ ಭಾರತವನ್ನು ನಾವಿಂದು ಕಟ್ಟಬೇಕು. ದೀನ ದೇವೋಭವ, ದಲಿತದೇವೋಭವ, ದರಿದ್ರದೇವೋಭವ ಎಂಬ ವಿವೇಕೋಕ್ತಿಗಳನ್ನು ಪಾಲಿಸಬೇಕು. ವಿವೇಕಾನಂದರು ಕಂಡ ಕನಸುಗಳನ್ನು ನನಸುಗೊಳಿಸುವ ಸನ್ಮಾರ್ಗದಲ್ಲಿ ನಾವು ಸಾಗಬೇಕು. ಇದೇ ನಾವು ವೀರ ಸನ್ಯಾಸಿ ವಿವೇಕಾನಂದರಿಗೆ ಸಲ್ಲಿಸುವ ಬಹುದೊಡ್ಡ ಸೆಲ್ಯೂಟ್. ಅಷ್ಟೇ ಅಲ್ಲ, ಇದು ಬ್ರಿಟಿಷರ ಸಂಕೋಲೆಯಲ್ಲಿ ನಲುಗಿದ್ದ ಭಾರತವನ್ನು ಪುನಶ್ಚೇತನಗೊಳಿಸುವಲ್ಲಿ ಅವಿತರವಾಗಿ ಶ್ರಮಿಸಿದ, ಸ್ವಾಭಿಮಾನ ಶ್ಯೂನರಾಗಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿದ್ದ ಭಾರತೀಯರಿಗೆ ವಿವೇಕದ ಅಮೃತ ಕುಡಿಸಿ ಹಿಂದೂ ಧರ್ಮವನ್ನು ಸಂರಕ್ಷಿಸುವಲ್ಲಿ ಹಾಗೂ ಅದರ ಸಾರವನ್ನು ತಿಳಿಸುವಲ್ಲಿ ಒಂದು ವೇದಿಕೆಯಂತೆ ಕೆಲಸ ಮಾಡಿದ ಮಹಾಚೇತನ ಸ್ವಾಮಿ ವಿವೇಕಾನಂದರಿಗೆ ನಾವು ನೀಡುವ ಮಹಾ ಗೌರವವೂ ಹೌದು.

ವಿವೇಕಾನಂದನಾದ ವಿಶ್ವೇಶ್ವರ!

ಇಂಥ ಧೀರೋದ್ಧಾತ ದಿವ್ಯಪುರುಷ, ಮಹಾಚೇತನ, ಮಹಾಚೈತನ್ಯ, ವಿಶ್ವವಿಜೇತ ಸ್ವಾಮಿ ವಿವೇಕಾನಂದರು ಜಗತ್ತಿಗೆ ಅವತರಿಸಿದ್ದು 1863 ರ ಜನವರಿ 12 ರಂದು ಕೊಲ್ಕತ್ತಾದ ಆಗರ್ಭ ಶ್ರೀಮಂತದತ್ತ ಮನೆತನದಲ್ಲಿ. ವಿವೇಕಾನಂದರು ಕಾಶಿವಿಶ್ವನಾಥನ ವರದಿಂದ ಜನಿಸಿದವ ರೆಂದು ನಂಬಿದ್ದರಿಂದ ಇವರನ್ನು ಮೊದಮೊದಲು ವಿಶ್ವೇಶ್ವರನೆಂದು ಕರೆಯಲಾಗುತ್ತಿತ್ತು. ಮುಂದೆ ನರೇಂದ್ರ, ನರೇಂದ್ರನಾಥ ಎಂದು ಕರೆಯಲಾಯಿತು. ಶ್ರೀರಾಮ ಕೃಷ್ಣಪರ ಮಹಂಸರ ಶಿಷ್ಯರಾಗಿ ಸಂನ್ಯಾಸ ಸ್ವೀಕರಿಸಿದ ಮೇಲೆ ಇವರು ‘ವಿವೇಕಾನಂದ’ ಎಂಬ ಹೆಸರನ್ನು ಪಡೆದು ವಿಶ್ವವಿಖ್ಯಾತರಾದರು.

ಶ್ರೀರಾಮಕೃಷ್ಣ ಪರಮಹಂ ಸ ಹಾಗೂ ಸ್ವಾಮಿ ವಿವೇಕಾನಂದರ ಗುರು ಶಿಷ್ಯ ಸಂಬಂಧ ಇಡೀ ಜಗತ್ತಿಗೆ ಮಾದರಿಯಾಗುವಂತಾದ್ದು. ವಿವೇಕಾನಂದರ ಮುಖ್ಯ ಕೊಡುಗೆ ಎಂದರೆ, ಅದ್ವೈತ ಸಿದ್ಧಾಂತ  ಕೇವಲ ತಾತ್ವಿಕವಾಗಿ ಉಚ್ಛ ತಂತ್ರಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿ ಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿ ಕೊಟ್ಟರು. ಅವರ ಅಭಿಪ್ರಾಯದಂತೆ ರಾಮಕೃಷ್ಣ  ಪರಮಹಂಸರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ‘ಎಲ್ಲರಲ್ಲಿಯೂ ದೇವರಿದ್ದಾರೆ’ ಎಂಬುದು. ಇದೇ ವಿವೇಕಾನಂದರ ಮಂತ್ರವಾಯಿತಲ್ಲದೆ ಇವರ ‘ದರಿದ್ರನಾರಾಯಣ ಸೇವೆ’ ಎಂಬ ತತ್ವಕ್ಕೆ ಮಾರ್ಗಸೂಚಿ ಮಾಡಿಕೊಟ್ಟಿತು. ಈ ತತ್ವದಂತೆಯೇ ದೀನದಲಿತರ, ಬಡಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ಮಾರ್ಗವನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು, ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು? ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಪೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಬೇಧ-ಭಾವಗಳು ಇಲ್ಲವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ತಳಸ್ತರದ  ಜನರ ಬಗೆಗೆ ಸಂತಾಪ ಹಾಗೂ ಅವರಿಗೆ ಸಹಾಯ ಮಾಡುವ ಸದೃಢ ನಿರ್ಧಾರ.

ಲೇಖನ: ಬನ್ನೂರು ಕೆ ರಾಜು, ಸಾಹಿತಿ, ಪತ್ರಕರ್ತ

 

Follow Us:
Download App:
  • android
  • ios