ನವದೆಹಲಿ :  ಬೇಸಿಗೆ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ‘ಸ್ವಚ್ಛ ಭಾರತ’ ಯೋಜನೆಯಲ್ಲಿ ಭಾಗಿಯಾಗಲು ಅನುವಾಗುವಂಥ ವಿಶೇಷ ಯೋಜನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಅವರು ಈ ಕೊಡುಗೆಯನ್ನು ಪ್ರಕಟಿಸಿದ್ದಾರೆ.

ಭಾನುವಾರ ಆಕಾಶವಾಣಿಯಲ್ಲಿ 30 ನಿಮಿಷ ಕಾಲ ಮಾತನಾಡಿದ ಮೋದಿ, ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ‘ಸ್ವಚ್ಛ ಭಾರತ ಅಭಿಯಾನ’ದ ತರಬೇತಿ ಶಿಬಿರವನ್ನು ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ 3 ಸಚಿವಾಲಯಗಳು ಈ ತರಬೇತಿ ಕಾರ್ಯಕ್ರಮ ಆರಂಭಿಸಿವೆ. ಸಮಾಜ ಸೇವೆ ಮಾಡಬಯಸುವ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು ಎಂದರು.

ಇದರಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರುವ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ನೀಡಲಾಗುತ್ತದೆ. ಅಲ್ಲದೆ, ಗುರಿ ತಲುಪುವ ವಿದ್ಯಾರ್ಥಿಗಳಿಗೆ ಯುಜಿಸಿ 2 ಕ್ರೆಡಿಟ್‌ ಪಾಯಿಂಟ್‌ಗಳನ್ನೂ ನೀಡಲಾಗುತ್ತದೆ ಎಂದು ಘೋಷಿಸಿದರು.

ಬುದ್ಧ ಪೂರ್ಣಿಮೆಯ ಪೋಖ್ರಣ್‌ ನೆನಪು:

ಇದೇ ವೇಳೆ 1998ರಲ್ಲಿ ಬುದ್ಧ ಪೂರ್ಣಿಮೆಯಂದು ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಪೋಖ್ರಣ್‌ ಅಣು ಪರೀಕ್ಷೆ ನಡೆದ ಉದಾಹರಣೆ ನೀಡಿದ ಮೋದಿ, ಯುವಕರು ವಾಜಪೇಯಿ ಅವರ ‘ಜೈ ವಿಜ್ಞಾನ್‌’ ಮಂತ್ರ ಪಾಲಿಸಬೇಕು ಎಂದು ಕರೆ ನೀಡಿದರು.

ರಮಜಾನ್‌ ಹಬ್ಬ ಇನ್ನೇನು ಆರಂಭವಾಗಲಿದ್ದು, ಇದರ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ‘ಪ್ರವಾದಿ ಮೊಹಮ್ಮದರ ಬೋಧನೆಗಳು ಸ್ಫೂರ್ತಿ ನೀಡುವಂಥವು. ಅವರು ಜ್ಞಾನದಲ್ಲಿ ನಂಬಿಕೆ ಇಟ್ಟಿದ್ದರು. ಅವರ ಜೀವನವನ್ನು ಗಮನಿಸಿದಾಗ ಸಮಾನತೆ ಮತ್ತು ಭ್ರಾತೃತ್ವದಲ್ಲಿ ಅವರು ನಂಬಿಕೆ ಇಟ್ಟಿದ್ದನ್ನು ತೋರಿಸುತ್ತದೆ’ ಎಂದರು. ಜೂನ್‌ 21ರ ಯೋಗ ದಿನವನ್ನು ಸ್ಮರಣೀಯ ಮಾಡಿ ಎಂದೂ ಅವರು ಜನರಿಗೆ ಕರೆ ನೀಡಿದರು.

ಏನಿದು ಸ್ವಚ್ಛ ತರಬೇತಿ ಶಿಬಿರ ಯೋಜನೆ?

ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 100 ಗಂಟೆಗಳ ಸ್ವಚ್ಛ ಭಾರತ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಿದೆ. ಗ್ರಾಮಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ 2 ಲಕ್ಷ ರು. ವರೆಗಿನ ನಗದು ಬಹುಮಾನ ಮತ್ತು ಎರಡು ಶೈಕ್ಷಣಿಕ ಅಂಕಗಳನ್ನು ನೀಡಲಾಗುತ್ತದೆ. ಸ್ವಚ್ಛತಾ ತರಬೇತಿ ಶಿಬಿರ ಉನ್ನತ ಶಿಕ್ಷಣ ಸಂಸ್ಥೆಗಳ ನೋಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರವಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನೋಡಲ್‌ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ಈ ಉದ್ದೇಶಕ್ಕಾಗಿ ವೆಬ್‌ಸೈಟ್‌ವೊಂದನ್ನು ಆರಂಭಿಸಲಾಗಿದೆ ಎಂದು ಶಿಕ್ಷಣ ಕಾರ್ಯದರ್ಶಿ ಆರ್‌. ಸುಬ್ರಹ್ಮಣ್ಯಂ ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದಾರೆ.