ಹಾವೇರಿ ಜಿಲ್ಲಾಸ್ಪತ್ರೆ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ತಪಾಸಣೆಯ ಲ್ಯಾಬ್ ಇದೆ. ಆದರೆ ಇಲ್ಲಿಯ ವೈದ್ಯರು ರೋಗಿಗಳನ್ನು ಖಾಸಗಿ ಲ್ಯಾಬ್'ಗಳಿಗೆ ಚೀಟಿ ಬರೆದು ಕಳುಹಿಸುತ್ತಿದ್ದಾರೆ. ದುರಂತ ಅಂದರೆ ವೈದ್ಯರು ಕಳುಹಿಸುವ ಖಾಸಗಿ ಲ್ಯಾಬ್'ಗಳಿಗೆ ಪರವಾನಗಿಯೇ ಇಲ್ಲ
ಹಾವೇರಿ(ಮಾ.01): ಜಿಲ್ಲೆಯಲ್ಲಿ ಖಾಸಗಿ ಲ್ಯಾಬ್'ಗಳ ಕರಾಳ ದಂಧೆಗೆ ಬ್ರೇಕ್ ಬಿದ್ದಿದೆ. ಜಿಲ್ಲಾಸ್ಪತ್ರೆಗಳ 'ಬಂಡವಾಳ'ವನ್ನು ಸುವರ್ಣ ನ್ಯೂಸ್ ಬಯಲು ಮಾಡಿತ್ತು. ಸುವರ್ಣ ನ್ಯೂಸ್ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಹಾವೇರಿ ಉಪವಿಭಾಗಾಧಿಕಾರಿ ರೇಡ್ ಮಾಡಿದ್ದಾರೆ.
ವೈದ್ಯರ ಜೊತೆ ಶಾಮೀಲಾಗಿ ಲ್ಯಾಬ್'ಗಳು ಬಡ ರೋಗಿಗಳ ಸುಲಿಗೆಗಿಳಿದಿದ್ದವು. ಈ ವರದಿಯನ್ನು ಸುವರ್ಣ ನ್ಯೂಸ್ ವಿಸ್ತೃತವಾಗಿ ಪ್ರಸಾರ ಮಾಡಿತ್ತು.
ಏನಿದು ಹಗರಣ
ಹಾವೇರಿ ಜಿಲ್ಲಾಸ್ಪತ್ರೆ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರಕ್ತ ತಪಾಸಣೆಯ ಲ್ಯಾಬ್ ಇದೆ. ಆದರೆ ಇಲ್ಲಿಯ ವೈದ್ಯರು ರೋಗಿಗಳನ್ನು ಖಾಸಗಿ ಲ್ಯಾಬ್'ಗಳಿಗೆ ಚೀಟಿ ಬರೆದು ಕಳುಹಿಸುತ್ತಿದ್ದಾರೆ. ದುರಂತ ಅಂದರೆ ವೈದ್ಯರು ಕಳುಹಿಸುವ ಖಾಸಗಿ ಲ್ಯಾಬ್'ಗಳಿಗೆ ಪರವಾನಗಿಯೇ ಇಲ್ಲ. ಆಸ್ಪತ್ರೆ ಪಕ್ಕದಲ್ಲಿಯೇ ನಾಯಿಕೊಡೆಗಳಂತೆ ತಲೆ ಎತ್ತಿರುವ ಈ ಲ್ಯಾಬ್ ಗಳ ಜತೆ ವೈದ್ಯರು ಕಮಿಷನ್ ಪಡೆಯುತ್ತಾರೆ ಎನ್ನುವ ಆರೋಪವಿದೆ.
ಇದು ಹಾವೇರಿ ಜಿಲ್ಲಾಸ್ಪತ್ರೆ. ಇಲ್ಲಿದೆ ಪ್ರತಿನಿತ್ಯ 1 ರಿಂದ 2 ಸಾವಿರ ಜನರು ಬರುತ್ತಾರೆ. ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಉಚಿತ ಹಾಗೂ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎನ್ನುವ ವಿಶ್ವಾಸದ ಮೇಲೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ ಜನರ ಪಾಲಿಗೆ ಈ ಆಸ್ಪತ್ರೆ ಇದ್ದು ಸತ್ತಂತಾಗಿದೆ. ಜಿಲ್ಲಾಸ್ಪತ್ರೆ'ಯಲ್ಲಿ ರಕ್ತ ತಪಾಸಣೆ ಮಾಡುವ ಪ್ರಯೋಗಾಲಯವಿದೆ. ಆದರೆ ಇಲ್ಲಿಗೆ ಜನರು ಹೋಗುವುದು ತುಂಬಾ ಕಡಿಮೆ. ಹಾಗಾದರೆ ಇವರೆಲ್ಲ ಮತ್ತೆಲ್ಲಿಗೆ ಹೋಗುತ್ತಾರೆ ಎನ್ನುವುದನ್ನ ಕಂಡು ಹಿಡಿಯಲು ಸುವರ್ಣನ್ಯೂಸ್ ಅವರ ಹಿಂದೆ ಬಿದ್ದಾಗ, ದುರಂತದ ಸಂಗತಿಯೊಂದು ಸುವರ್ಣನ್ಯೂಸ್ ಕ್ಯಾಮರ ಕಣ್ಣಲ್ಲಿ ಸೆರೆಯಾಯಿತು.
ಸಿನಿಮಾ ಮಂದಿರಗಳಿಗೆ ಹೋಗುವ ಹಾಗೆ ಆಸ್ಪತ್ರೆ ಅಕ್ಕಪಕ್ಕದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಪ್ರಯೋಗಾಲಯಗಳಿಗೆ ಜನರು ಹೋಗುತ್ತಾರೆ. ಇವರೆಲ್ಲ ಸುಮ್ಮನೆ ಇಲ್ಲಿಗೆ ಹೋಗಲ್ಲ, ಸ್ವತಃ ಜಿಲ್ಲಾಸ್ಪತ್ರೆ ವೈದ್ಯರೇ ಇವರನ್ನು ಇಲ್ಲಿಗೆ ಕಳುಹಿಸುತ್ತಾರೆ. ವೈದ್ಯರ ಟೇಬಲ್ ಮೇಲೆ ಈ ಖಾಸಗಿ ಪ್ರಯೋಗಾಲಯಗಳ ಚೀಟಿ ಇದೆ. ರಾಜಾರೋಷವಾಗಿ ಯಾರ ಭಯವೂ ಇಲ್ಲದೆ ಈ ಚೀಟಿಯಲ್ಲಿ ವೈದ್ಯರು ಬರೆದು ಕಳುಹಿಸುತ್ತಾರೆ. ಹೀಗೆ ಬರೆದು ಕಳುಹಿಸುವುದು ತಪ್ಪು ಎನ್ನುವುದು ವೈದ್ಯರಿಗೆ ಗೊತ್ತಿದ್ದು ಅಲ್ಲಿಗೆ ಕಳುಹಿಸಿ ಜನರ ಸುಲಿಗೆ ಮಾಡಿಸುತ್ತಿದ್ದಾರೆ. 300 ರೂಪಾಯಿಯಿಂದ 700 ರೂಪಾಯಿಗಳವರೆಗೆ ಖಾಸಗಿ ಪ್ರಯೋಗಾಲಯಗಳು ಜನರ ಬಳಿ ಹಣ ವಸೂಲಿ ಮಾಡುತ್ತಿವೆ.
ಕಮಿಷನ್ ಆಸೆಗಾಗಿ ವೈದ್ಯರು ಖಾಸಗಿ ಪ್ರಯೋಗಾಲಯಗಳಿಗೆ ಜನರನ್ನ ಕಳುಹಿಸುತ್ತಿದ್ದಾರೆ. ಇನ್ನೊಂದು ದುರಂತದ ಸಂಗತಿ ಅಂದ್ರೆ ಈ ಖಾಸಗಿ ಪ್ರಯೋಗಾಲಯಗಳಿಗೆ ಪರವಾನಗಿಯೆ ಇಲ್ಲ. ಹಿಂದೆ ಆದರ್ಶ ಲ್ಯಾಬ್ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಯೋಗಾಲಯ ಈಗ ಮಾಲತೇಶ್ ಲ್ಯಾಬ್ ಹೆಸರಿನಲ್ಲಿ ತಲೆ ಎತ್ತಿದೆ. ಆದ್ರೆ ಹೊರಗಡೆ ಇದಕ್ಕೆ ನಾಮಫಲಕವೆ ಇಲ್ಲ. ಈ ಪ್ರಯೋಗಾಲಯ ಕೊಟ್ಟ ವರದಿಯಿಂದ ಹಿಂದೆ ಜನರಿಗೆ ತೊಂದರೆಯಾಗಿ ಇದನ್ನ ಬಂದ್ ಮಾಡಿದ್ದರು. ಈಗ ಇದು ಮತ್ತೆ ಆರಂಭವಾಗಿದೆ. ರಾಜು ಎನ್ನುವವರಿಗೆ ಸೇರಿದ ಈ ಪ್ರಯೋಗಾಲಯದಲ್ಲಿ ಕಾಲಿಡಲು ಸಹ ಸ್ಥಳವಿಲ್ಲ.
ಒಬ್ಬಳು ಹುಡುಗಿ ಎಲ್ಲವನ್ನ ವ್ಯವಹರಿಸುತ್ತಾಳೆ. ಇನ್ನೂ ಕಾಗಿನೆಲೆ ರಸ್ತೆಯಲ್ಲಿರುವ ವಿಶ್ವ ಲ್ಯಾಬಿಗೂ ಸಹ ಪರವಾನಗಿ ಇಲ್ಲ. ಕಳೆದ 9 ತಿಂಗಳ ಹಿಂದೆ ಇದು ತಲೆ ಎತ್ತಿದೆ. ವಿಶ್ವನಾಥ್ ಇದರ ಮಾಲೀಕನಾಗಿದ್ದು ಹೆಂಡತಿ ಹೆಸರಿನಲ್ಲಿ ನಡೆಸುತ್ತಿದ್ದಾನೆ. ಮತ್ತೊಂದು ಸಂಗತಿ ಅಂದರೆ ಈ ವಿಶ್ವನಾಥ್ ಜಿಲ್ಲಾಸ್ಪತ್ರೆ ಯ ಎ.ಆರ್.ಟಿ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೇಲಸ ಮಾಡುತ್ತಿದ್ದಾನೆ. ಈತ ಜಿಲ್ಲಾಸ್ಪತ್ರೆ ಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ತನ್ನ ಸ್ವಂತ ಲ್ಯಾಬ್'ನಲ್ಲಿಯೇ ಉಳಿಯುತ್ತಾನೆ.
ಸಂಹಿತಾ ಎನ್ನುವ ಮತ್ತೊಂದು ಲ್ಯಾಬ್ ಸಹ ಇಲ್ಲಿಯೆ ಇದೆ. ಈ ಲ್ಯಾಬ್ ಒಳಗೆ ಉಸಿರಾಡುವುದಕ್ಕೂ ಸಹ ಸ್ಥಳ ಇಲ್ಲ. ಸರಕಾರಿ ನಿಯಮದ ಪ್ರಕಾರ 150 ಸ್ಕ್ವೇರ್ ಫೀಟ್ ಇರಬೇಕು. ಒಳಗಡೆ ಎಸಿ ಇರಬೇಕು ಆದರೆ ಇಲ್ಲಿ ಏನು ಇಲ್ಲ. ಇದರ ಮಾಲೀಕ ವಿನಾಯಕ. ಇತನು ಸಹ ಜಿಲ್ಲಾಸ್ಪತ್ರೆ ಯಲ್ಲಿ ಟಿ.ಬಿ ಸೆಂಟರನಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಾನೆ. ಹೀಗೆ ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ಈ ರಕ್ತತಪಾಸಣಾ ಪ್ರಯೋಗಾಲಯಗಳು ತಲೆ ಎತ್ತಿದ್ದು, ಅವರ ಜತೆ ವೈದ್ಯರು ಶಾಮಿಲಾಗಿ ಜನರ ಸುಲಿಗೆ ಮಾಡುತ್ತಿದ್ದರು.
--
