ಇಂದಿರಾ ಕ್ಯಾಂಟೀನ್​ನಲ್ಲಿ ಅವ್ಯವಸ್ಥೆ, ಕಿಚನ್ ಸಮಸ್ಯೆ ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ  ಪಾಲಿಕೆ ಈಗ ಗುಣಮಟ್ಟ ಓಕೆ.. ಕಿಚನ್ ಕೂಡ ಬಲಾವಣೆ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಹಸಿವು ಮುಕ್ತ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಬಗ್ಗೆ ಆರಂಭದಿಂದಲೇ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಊಟದಲ್ಲಿ ಕ್ವಾಲಿಟಿ ಇಲ್ಲ, ಅಡುಗೆ ಮಾಡೋ ಸ್ಥಳದಲ್ಲಿ ಸ್ವಚ್ಛತೆಯಿಲ್ಲ ಎಂಬ ಆರೋಪ ಕೇಳಿ ಬಂತಿತ್ತು. ಸುವರ್ಣ ನ್ಯೂಸ್ ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಮ್ಮ ವರದಿ ಈಗ ಫಲ ನೀಡಿದೆ.

ಇಂದಿರಾ ಕ್ಯಾಂಟೀನ್ ಅಡುಗೆ ಕಾರ್ಯ ಈಗ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿರುವ ಬಿಬಿಎಂಪಿ ಸಮುದಾಯದ ಭವನಕ್ಕೆ ಸ್ಥಳಾಂತರವಾಗಿದೆ. ಇಂದಿರಾ ಕ್ಯಾಂಟೀನ್​ಗೆ ಊಟ, ತಿಂಡಿ ಸರಬರಾಜು ಗುತ್ತಿಗೆ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ , ಕೇತಮಾರನಹಳ್ಳಿ ಗೃಹ ನಿರ್ಮಾಣ ಸಹಕಾರ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆಹಾರ ತಯಾರು ಮಾಡುತಿತ್ತು. ಶೂ, ಚಪ್ಪಲಿ, ಪಾತ್ರೆ ತೊಳೆಯುವ ಜಾಗದಲ್ಲೇ ಮೊಸರನ್ನ ಸಿದ್ಧವಾಗ್ತಿತ್ತು. ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ವರದಿ ಬಿತ್ತರಿಸಿದ ಬೆನ್ನಲ್ಲೇ ಅಡುಗೆ ಜಾಗ ಬದಲಾವಣೆಯಾಗಿದೆ.

ಇನ್ನೂ ಹೊಸ ಜಾಗದಲ್ಲಿ ಅಚ್ಚುಕಟ್ಟಾಗಿ ಅಡುಗೆ ನಡೆಯುತ್ತಿದೆ. ಸ್ವಚ್ಛತೆ, ಗುಣಮಟ್ಟ ಕೂಡ ಕಾಯ್ದುಕೊಳ್ಳಲಾಗ್ತಿದೆ. ಅಷ್ಟೇ ಅಲ್ಲ, ಸ್ವಚ್ಛತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೂಡ ಬಿಬಿಎಂಪಿ ಶೆಫ್ ಟಾಕ್ ಸಂಸ್ಥೆಗೆ ಸೂಚಿಸಿದೆ. ಇನ್ನೂ ಅಡುಗೆ ತಯಾರಿಸುವ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನಿಗಾ ವಹಿಸುತ್ತಿರೋದು ಇನ್ನೊಂದು ವಿಶೇಷ.