ಬ್ಯಾಂಕ್ ಅಧಿಕಾರಿಗಳ‌ ನಿರ್ಧಾರದಿಂದ ರೈತರ ಮುಖದಲ್ಲಿ ನೆಮ್ಮದಿ ‌ಮೂಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಸುವರ್ಣ ನ್ಯೂಸ್ ಕಚೇರಿಗೆ ಆಗಮಿಸಿದ ರೈತರು ಸಿಹಿ ಹಂಚಿ ಖುಷಿಪಟ್ಟರು. ಸುವರ್ಣನ್ಯೂಸ್'ನ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹುಬ್ಬಳ್ಳಿ(ಏ. 03): ಬಲವಂತವಾಗಿ ಸಾಲ ವಸೂಲಾತಿಗೆ ಮುಂದಾಗಿ ರೈತರಿಗೆ ನೋಟಿಸ್ ಜಾರಿ ಮಾಡಿದ್ದ ಹುಬ್ಬಳ್ಳಿಯ ವಿಜಯ ಬ್ಯಾಂಕ್ ಈಗ ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತಿದೆ. ಸತತ ವರದಿಯಿಮದ ಎಚ್ಚೆತ್ತ ಬ್ಯಾಂಕ್​ ಅಧಿಕಾರಿಗಳು ರೈತರಿಗೆ ನೀಡಿದ್ದ‌ ನೋಟೀಸ್'ನ್ನ ಹಿಂಪಡೆಯುವುದಾಗಿ ಘೋಷಿಸಿದೆ. 

ಬರಗಾಲದಲ್ಲಿ ರೈತರಿಗೆ ನೋಟಿಸ್ ನೀಡಿ ಮಾನ ಹರಾಜು ಹಾಕಿದ್ದು ತಪ್ಪಾಗಿದೆ. ಇನ್ಮುಂದೆ ಯಾವುದೇ ಕಾರಣಕ್ಕೂ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವುದಿಲ್ಲ ಎಂದು ವಿಜಯ ಬ್ಯಾಂಕ್'ನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸುವರ್ಣನ್ಯೂಸ್ ವರದಿಗಾರ ಗುರುರಾಜ್ ಹೂಗಾರ್ ಜೊತೆ ಮಾತನಾಡಿದ ವಿಜಯಾ ಬ್ಯಾಂಕ್'ನ ಮ್ಯಾನೇಜರ್ ಚಂದ್ರಶೇಖರ್ ವೆಳ್ಳೂರು, ಅಚಾತುರ್ಯದಿಂದ ರೈತರಿಗೆ ನೋಟೀಸ್ ಜಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೂರು ವರ್ಷದಿಂದ ರಿನಿವ್ ಮಾಡದೇ ಇರುವ ಸಾಲದ ವಿಚಾರದಲ್ಲಿ ರೈತರಿಂದ ಡಾಕ್ಯುಮೆಂಟ್'ಗೆ ಸಹಿ ಹಾಕಿಸಿಕೊಳ್ಳಲು ನೋಟೀಸ್ ಜಾರಿ ಮಾಡಲಾಗುತ್ತದೆ. ಇದು ಬ್ಯಾಂಕ್'ನ ಫಾರ್ಮಾಲಿಟೀಸ್ ಅಷ್ಟೇ ಎಂದವರು ಹೇಳಿದ್ದಾರೆ.

ಮೂರು ವರ್ಷದಿಂದ ಬರಗಾಲದಿಂದ ಕಂಗೆಟ್ಟಿರುವ ಹುಬ್ಬಳ್ಳಿ ಜನರಿಗೆ ವಿಜಯಾ ಬ್ಯಾಂಕ್ ನೆರವಿಗೆ ಮುಂದಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ರೈತರ ಸಾಲದ ಮೇಲಿನ ಬಡ್ಡಿಯನ್ನು ವಿಜಯಾ ಬ್ಯಾಂಕ್ ಸ್ವಯಂಪ್ರೇರಿತವಾಗಿ ಮನ್ನಾ ಮಾಡುತ್ತಿದೆ. ಸರಕಾರದ ಜವಾಬ್ದಾರಿಯಾದರೂ ತಮ್ಮ ಬ್ಯಾಂಕ್ ರೈತರಿಗೋಸ್ಕರ ತಾನೇ ಈ ಕಾರ್ಯ ಮಾಡುತ್ತಿದೆ. ಸುಮಾರು 16 ಕೋಟಿಗಳಷ್ಟು ಬಡ್ಡಿ ಮನ್ನಾ ಮಾಡಿದ್ದೇವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ಬ್ಯಾಂಕ್ ಅಧಿಕಾರಿಗಳ‌ ನಿರ್ಧಾರದಿಂದ ರೈತರ ಮುಖದಲ್ಲಿ ನೆಮ್ಮದಿ ‌ಮೂಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಸುವರ್ಣ ನ್ಯೂಸ್ ಕಚೇರಿಗೆ ಆಗಮಿಸಿದ ರೈತರು ಸಿಹಿ ಹಂಚಿ ಖುಷಿಪಟ್ಟರು. ಸುವರ್ಣನ್ಯೂಸ್'ನ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.