ಬೆಳಗಾವಿ ಜಿಲ್ಲೆ ಹೊಸವಂಟಮುರಿ ಗ್ರಾಮದ ಬ್ಯಾಡರ ಓಣಿಯ ಮಲ್ಲವ್ವ.. ಕಲ್ಲವ್ವಾ.. ಸಿದ್ದವ್ವಾ.. ಹೀಗೆ ಒಬ್ಬರಲ್ಲ.. ಇಬ್ಬರಲ್ಲ. ಎಲ್ಲರ ಬಾಯಲ್ಲೂ ಇದೇ ಮಾತು.. ಗರ್ಭಪಾತ.. ಇವರ ಕಣ್ಣೀರಿನ ಕತೆ ಕೇಳುತ್ತಿದ್ದರೆ ಕಲ್ಲು ಹೃದಯವೂ ಕರಗುತ್ತೆ. ಒಂದಲ್ಲ, ಎರಡಲ್ಲ,ಮತ್ತೆ ಮತ್ತೆ ಗರ್ಭಪಾತ, ತಮ್ಮದಲ್ಲದ ತಪ್ಪಿಗೆ ಈ ಹೆಣ್ಮಕ್ಕಳಿಗೆ ಸಿಕ್ಕುತ್ತಿರೋದು ಬಂಜೆ ಎಂಬ ಪಟ್ಟ.
ಬೆಳಗಾವಿ(ಮಾ.17): ಇದು ನೂರಾರು ತಾಯಂದಿರ ಕಣ್ಣೀರ ಕತೆ. ತಾಯ್ತನವನ್ನೇ ಕಳೆದುಕೊಂಡವರ ಗೋಳಿನ ಕತೆ. ನೀರಿಗಾಗಿ ಹುಟ್ಟೋ ಕೂಸನ್ನೇ ಕಳೆದುಕೊಂಡವರ ವ್ಯಥೆ. ಇವರ ನೋವಿನ ಕತೆಯನ್ನ ಕೇಳಿದ್ರೆ ನಿಮ್ಮ ಕಣ್ಣಂಚಿನಲ್ಲೂ ನೀರು ಹರಿಯುತ್ತದೆ. ತಾಯ್ತನದ ಭಾಗ್ಯವನ್ನೇ ಕಾಣದ ಮಹಿಳೆಯರ ಸಂಕಷ್ಟಕ್ಕೆ ಸರ್ಕಾರ ನೆರವಾಗುತ್ತೆ ಅನ್ನುವ ಭರವಸೆಯೊಂದಿಗೆ ಸರ್ಕಾರದ ಮುಂದೆ ತಾಯಂದಿರ ಕಣ್ಣೀರ ಕಹಾನಿ ಬಿಚ್ಚಿಡುವ ಪ್ರಯತ್ನ ನಮ್ಮದು.
ಬೆಳಗಾವಿ ಜಿಲ್ಲೆ ಹೊಸವಂಟಮುರಿ ಗ್ರಾಮದ ಬ್ಯಾಡರ ಓಣಿಯ ಮಲ್ಲವ್ವ.. ಕಲ್ಲವ್ವಾ.. ಸಿದ್ದವ್ವಾ.. ಹೀಗೆ ಒಬ್ಬರಲ್ಲ.. ಇಬ್ಬರಲ್ಲ. ಎಲ್ಲರ ಬಾಯಲ್ಲೂ ಇದೇ ಮಾತು.. ಗರ್ಭಪಾತ.. ಇವರ ಕಣ್ಣೀರಿನ ಕತೆ ಕೇಳುತ್ತಿದ್ದರೆ ಕಲ್ಲು ಹೃದಯವೂ ಕರಗುತ್ತೆ. ಒಂದಲ್ಲ, ಎರಡಲ್ಲ,ಮತ್ತೆ ಮತ್ತೆ ಗರ್ಭಪಾತ, ತಮ್ಮದಲ್ಲದ ತಪ್ಪಿಗೆ ಈ ಹೆಣ್ಮಕ್ಕಳಿಗೆ ಸಿಕ್ಕುತ್ತಿರೋದು ಬಂಜೆ ಎಂಬ ಪಟ್ಟ.
ಮುದ್ದಾದ ಮಕ್ಕಳೊಂದಿಗೆ ನಗು ನಗುತ ಸಂಸಾರ ಮಾಡಬೇಕೆಂಬ ಕನಸು ಕಣ್ಣೆದುರೇ ನುಚ್ಚು ನೂರಾಗುತ್ತಿದೆ. ಸುಂದರ ಸಂಸಾರದ ಕನಸು ಹೊತ್ತು ಬಂದ ಹೆಣ್ಮಕ್ಕಳ ಪಾಲಿಗೆ ನೀರಿನ ಸಮಸ್ಯೆಯೇ ಮುಳುವಾಗುತ್ತಿದೆ.
ಬೆಳಗಾದರೆ ಸಾಕು ನೀರಿಗಾಗಿ ಓಡಬೇಕು. ಬಿಸಲು, ಚಳಿಯೆನ್ನದೇ ತಗ್ಗು, ದಿಣ್ಣೆಯನ್ನೂ ಲೆಕ್ಕಿಸದೇ ಕಿಲೋಮೀಟರ್ ಗಟ್ಟಲೆ ದೂರ ಹೋಗಿ ನೀರು ಹೊತ್ತು ತರಬೇಕು. ನೀರಿನ ಭಾರ ಇವರ ಮಕ್ಕಳ ಭಾಗ್ಯವನ್ನೇ ಕಿತ್ತುಕೊಳ್ತಿದೆ. ಸುಮಾರು 8 ಮಹಿಳೆಯರಿಗೆ ಮೂರು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ಗರ್ಭಪಾತವಾಗಿದೆಯಂತೆ.
12 ಸಾವಿರ ಜನರಿಗೆ ಒಂದೇ ಬಾವಿ
ಅಷ್ಟಕ್ಕೂ ಹೊಸವಂಟಮೂರಿ ಗ್ರಾಮದಲ್ಲಿರೋದು 12 ಸಾವಿರ ಜನಸಂಖ್ಯೆ. ಇರೋದು ಒಂದೇ ಒಂದು ಬಾವಿ. ಊರಿಂದ ಬಹುದೂರದಲ್ಲಿರೋ ಬಾವಿ ನೀರಿಗೆ ಅಲೆದು ಅಲೆದು ಗರ್ಭ ಜಾರುತ್ತಿದೆ. ಶಾಸಕ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಇತ್ತ ಕಣ್ಣು ಹಾಯಿಸುತ್ತಿಲ್ಲ. ಮೂವತ್ತು ವರ್ಷದ ಸಮಸ್ಯೆಗೆ ಪರಿಹಾರ ಸಿಗ್ತಿಲ್ಲ. ನೀವಾದ್ರೂ ನಮ್ಮ ಈ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡಿ ಎಂದು ಸುವರ್ಣ ನ್ಯೂಸ್ ಎದುರು ಕಣ್ಣೀರಿಡುತ್ತಾ ಬೇಡಿಕೊಳ್ಳೋ ಈ ಹೆಣ್ಮಕ್ಕಳ ಅಳಲು ಎಂಥವರ ಮನಕಲುಕುವಂತಿದೆ.
ನಿಜಕ್ಕೂ ನೀರು ಹೊತ್ತು..ಹೊತ್ತೇ ಗರ್ಭ ಜಾರುತ್ತಿದೆ ಅಂತಾರೆ ಡಿಎಚ್ಓ ನರಗಟ್ಟಿ
ಇದು ನಿಜಕ್ಕೂ ಬೆಚ್ಚಿ ಬೀಳಿಸೋ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ 2015 ಸಾಲಿನಲ್ಲಿ 2766 ಮಹಿಳೆಯರಿಗೆ ಗರ್ಭಪಾತವಾಗಿದೆ. 2016 -17ನೇ ಸಾಲಿನಲ್ಲಿ 2121 ಮಹಿಳೆಯರಿಗೆ ಗರ್ಭಪಾತವಾಗಿದೆ ಅನ್ನೋ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ಭಾರಹೊತ್ತ ಕಾರಣಕ್ಕೆ ಪ್ರತಿಶತ 40ರಷ್ಟು ಮಹಿಳೆಯರು ಗರ್ಭ ಕಳೆದುಕೊಳ್ಳೋದು ಎನ್ನುತ್ತಿದ್ದಾರೆ ಡಾಕ್ಟರ್ ನರಗಟ್ಟಿ.
ಸಿಎಂ ಸಿದ್ದರಾಮಯ್ಯನವರೇ. ಅನ್ನಭಾಗ್ಯ. ಕ್ಷೀರಭಾಗ್ಯ. ಹೀಗೆ ಹತ್ತಾರು ಭಾಗ್ಯದ ಯೋಜನೆ ರಾಜ್ಯಕ್ಕೆ ಕೊಟ್ಟಿದ್ದೀರಿ. ಆದರಲ್ಲಿ ಹೆಣ್ಮಕ್ಕಳ ತಾಯ್ತನದ ಭಾಗ್ಯವೇ ನೀರಿನ ದಾಹಕ್ಕೆ ಕೊಚ್ಚಿಹೋಗುತ್ತಿದೆ.. ಮದುವೆಯಾಗಿ ಮೂರ್ನಾಲ್ಕು ವರ್ಷವಾದ್ರೂ ತಾಯ್ತನದ ಸುಖ ಕಾಣದ ಈ ತಾಯಂದಿರ ನೋವನ್ನ ಒರೆಸಿ. ನೀರಿನ ಸಮಸ್ಯೆಯನ್ನು ತೊಡೆದುಹಾಕಿ. ಪುಣ್ಯ ಕಟ್ಟಿಕೊಳ್ಳಿ.
ವರದಿ: ಮಂಜುನಾಥ್ ಎಚ್ ಪಾಟೀಲ್, ಸುವರ್ಣ ನ್ಯೂಸ್
