ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಮನವಿ ಸಲ್ಲಿಸಿರುವ ಹಾಗೂ ಐಟಿ ಇಲಾಖೆ ಉತ್ತರ ನೀಡಿರುವ ದಾಖಲೆಗಳು ಸುವರ್ಣನ್ಯೂಸ್'ಗೆ ಮಾತ್ರ ಲಭಿಸಿವೆ.
ಬೆಂಗಳೂರು(ಫೆ. 26): ಸರಕಾರಕ್ಕೆ ಬೆವರಿಳಿಸುವಂಥ ಸುದ್ದಿ ಇದು. ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ವಿವಾಸದಲ್ಲಿ ಐಟಿ ದಾಳಿಯಾಗಿದ್ದು ನಿಜ. ದಾಳಿ ವೇಳೆ ಮನೆಯಲ್ಲಿ ಡೈರಿ ಸಿಕ್ಕಿದ್ದೂ ನಿಜ. ಆದಾಯ ತೆರಿಗೆ ಇಲಾಖೆಯೇ ಈ ವಿಚಾರವನ್ನು ದೃಢಪಡಿಸಿದೆ. ಈ ಬಗ್ಗೆ ಸ್ಪಷ್ಟ ಸಾಕ್ಷ್ಯ ಇರುವ ಕೆಲ ಎಕ್ಸ್'ಕ್ಲೂಸಿವ್ ದಾಖಲೆಗಳು ಸುವರ್ಣನ್ಯೂಸ್'ಗೆ ಲಭಿಸಿವೆ.
ಗೋವಿಂದರಾಜು ಮನೆಯಲ್ಲಿ ಡೈರಿ ಸಿಕ್ಕ ಘಟನೆಯ ಬಗ್ಗೆ ತನಿಖೆಗಾಗಿ ಐಟಿ ಇಲಾಖೆಯು 2016ರ ಡಿಸೆಂಬರ್'ನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿರುತ್ತದೆ. ಆ ನಂತರ ಉಪಲೋಕಾಯುಕ್ತರು ಲೋಕಾಯುಕ್ತ ರಿಜಿಸ್ಟ್ರಾರ್ ಮೂಲಕ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಉತ್ತರ ನೀಡಲು ಐಟಿ ಇಲಾಖೆಗೆ ಕಾನೂನಿನ ತೊಡಕು ಎದುರಾಗುತ್ತದೆ. ಅಗತ್ಯ ನಮೂನೆ ಭರ್ತಿ ಮಾಡಿದರೆ ಸಂಬಂಧಿತ ಮಾಹಿತಿ ನೀಡುತ್ತೇವೆ ಎಂದು ಲೋಕಾಯುಕ್ತ ರಿಜಿಸ್ಟ್ರಾರ್'ಗೆ ಐಟಿ ಇಲಾಖೆ ಉತ್ತರ ನೀಡುತ್ತದೆ. ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಮನವಿ ಸಲ್ಲಿಸಿರುವ ಹಾಗೂ ಐಟಿ ಇಲಾಖೆ ಉತ್ತರ ನೀಡಿರುವ ದಾಖಲೆಗಳು ಸುವರ್ಣನ್ಯೂಸ್'ಗೆ ಮಾತ್ರ ಲಭಿಸಿವೆ.
ಏನಿದು ಡೈರಿ ವಿಚಾರ?
ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಹಲವು ಸ್ಫೋಟಕ ಮಾಹಿತಿ ಇವೆ. ಕಾಂಗ್ರೆಸ್'ನ ಕಪ್ಪಕಾಣಿಕೆ ಸಂಸ್ಕೃತಿಯು ಇದರಲ್ಲಿ ಅನಾವರಣಗೊಂಡಿವೆ. ಕಾಂಗ್ರೆಸ್'ನ ಹೈಕಮಾಂಡ್'ಗೆ ರಾಜ್ಯದ ವಿವಿಧ ನಾಯಕರಿಂದ ಹೇಗೆ ಹಣ ಹರಿದುಹೋಗುತ್ತದೆ ಎಂಬುದು ಈ ಡೈರಿಯಲ್ಲಿರುವ ವಿವರದಿಂದ ತಿಳಿದುಬರುತ್ತದೆ.
