ಬೆಂಗಳೂರು/ಕಾರವಾರ[ಜೂ. 26]   ಪ್ರತಿಷ್ಠಿತ ‘ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿ’ಗೆ ಸುವರ್ಣ ನ್ಯೂಸ್ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ  ಭಾಜನರಾಗಿದ್ದಾರೆ.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರಕನ್ನಡ ಜಿಲ್ಲಾ ಘಟಕದಿಂದ ಪ್ರತಿವರ್ಷ ನೀಡಲಾಗುವ ರಾಜ್ಯ ಮಟ್ಟದ ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿ ಜಯಪ್ರಕಾಶ್ ಶೆಟ್ಟಿ ಅವರಿಗೆ ಸಂದಿದೆ.

ಜುಲೈ 1ರಂದು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ‌. ಕುಮಟಾ ಶಾಸಕ ದಿನಕರ ಶೆಟ್ಟಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹೀಮಂತರಾಜು, ಶಿವಾಜಿ ಕಾಲೇಜು ಬಾಡ ಕಾರವಾರ ಪ್ರಾಂಶುಪಾಲ ಶಿವಾನಂದ ನಾಯಕ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ಬಿಗ್ 3 ಜಯಪ್ರಕಾಶ್ ಶೆಟ್ಟಿಗೆ  'ಬೆಸ್ಟ್ ಆ್ಯಂಕರ್' ಗೌರವ

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಸ್ತುತ ಸಂದರ್ಭದಲ್ಲಿ ’ಪತ್ರಿಕೋದ್ಯಮ ಬಿಕ್ಕಟ್ಟುಗಳು: ಹೊಸ ಸಾಧ್ಯತೆಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಕರ್ನಾಟಕ ಜರ್ನಲಿಸ್ಟ್ ಜಿಲ್ಲಾಧ್ಯಕ್ಷ ಕಡತೋಕ ಮಂಜು ತಿಳಿಸಿದ್ದಾರೆ.

ಬೆಸ್ಟ್ ಆ್ಯಂಕರ್ ಗೌರವ: ತಮ್ಮ ಬಿಗ್-3 ಕಾರ್ಯಕ್ರಮದ ಮೂಲಕ ಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳ ಮತ್ತು ರಾಜಕಾರಣದ ನಾಯಕರ, ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರವಾಗುವರೆಗೂ ಪಟ್ಟು ಬಿಡದ ಶೆಟ್ಟಿ ಅವರಿಗೆ ಮತ್ತೊಂದು ಪ್ರಶಸ್ತಿ ಸಂದಿದಂತಾಗಿದೆ.  ಎಕ್ಸ್ ಚೇಂಜ್ ಫಾರ್ ಮೀಡಿಯಾ ಸಂಸ್ಥೆಯ ಬೆಸ್ಟ್ ಆ್ಯಂಕರ್ ಪ್ರಶಸ್ತಿಗೆ ಜಯಪ್ರಕಾಶ್ ಶೆಟ್ಟಿ ಭಾಜನರಾಗಿದ್ದರು.