ಬೆಂಗಳೂರು(ಸೆ.12): ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡಿನಲ್ಲೂ ಹೋರಾಟ ತೀವ್ರಗೊಳ್ಳುತ್ತಿದೆ. ತಮಿಳುನಾಡಿನ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದ್ದು, ಅಲ್ಲಿರುವ ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್ ಕಳಕಳಿ ವ್ಯಕ್ತಪಡಿಸಿದೆ. 

ಕಾವೇರಿ ಹೋರಾಟ ತಮಿಳುನಾಡು ಸರ್ಕಾರದ ವಿರುದ್ಧ. ತಮಿಳಿನವರ ವಿರುದ್ಧ ಅಲ್ಲ ಹೀಗಾಗಿ ದೈಹಿಕ ಹಲ್ಲೆಗಳಿಂದ ಕಾವೇರಿ ಸಮಸ್ಯೆ ಪರಿಹಾರವಾಗುವುದಿಲ್ಲ. ಕರ್ನಾಟಕದಲ್ಲಿನ ತಮಿಳಿಗರು ನೆಮ್ಮದಿಯಾಗಿದ್ದಾರೆ. ಹಾಗೆಯೇ, ತಮಿಳುನಾಡಲ್ಲಿರುವ ಕನ್ನಡಿಗರೂ ನೆಮ್ಮದಿಯಾಗಿರಲಿ ಎಂಬುದು ಸುವರ್ಣ ನ್ಯೂಸ್ ಕಳಕಳಿ. 

ಕಾವೇರಿ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವುದು ಶಾಂತಿಯುತ ಹೋರಾಟವಾಗಿದೆ, ಸುಮ್ಮನೆ ರಾಜಕೀಯ ದಾಳಕ್ಕೆ ಅಸ್ತ್ರವಾಗಬೇಡಿ. ಶಾಂತಿಯನ್ನು ಕಾಪಾಡಿ, ದೈಹಿಕ ಹಲ್ಲೆಯನ್ನು ನಿಲ್ಲಿಸಿ.

8 ದಿನಗಳಿಂದ ಕರ್ನಾಟಕದಲ್ಲಿ ಕಾವೇರಿ ಹೋರಾಟ ನಡೆಯುತ್ತಿದ್ದರೂ, ಇದುವರೆಗೆ ಒಬ್ಬ ತಮಿಳಿಗನ ಮೇಲೂ ದೌರ್ಜನ್ಯ ನಡೆದಿಲ್ಲ, ಇಂತಹ ಘಟನೆಗಳಲ್ಲಿ ಬಲಿಯಾಗುವುದು ಅಮಾಯಕರು ಮಾತ್ರ ಹಾಗಾಗಿ ಶಾಂತಿ ರೀತಿಯಲ್ಲಿ ಪ್ರತಿಭಟನೆ ನಡೆಸ ಬೇಕು. 

ಕಾನೂನು ಹೋರಾಟ ಜಾರಿಯಲ್ಲಿದೆ. ಸಮಸ್ಯೆ ಬಗೆಹರಿಸಲು ಕೋರ್ಟ್ ಇದೆ. ಹಾಗಾಗಿ ಯಾರು ಸಹ ಯಾರ ಮೇಲೆಯೂ ಹಲ್ಲೆ ಮಾಡಬಾರದು ಇದರಿಂದ ಅಮಾಯಕರಿಗೆ ತೊಂದರೆ ಇನ್ಯಾರಿಗೂ ಅಲ್ಲ.