ಸುವರ್ಣನ್ಯೂಸ್  ಬಯಲು ಮಾಡಿದ್ದ ಅರಣ್ಯ ಇಲಾಖೆಯ ಗುಂಡಿ ಗೋಲ್ ಮಾಲ್ ಹಗರಣದ ತನಿಖೆಯನ್ನು ಇಂದಿನಿಂದ ಅರಣ್ಯ ಇಲಾಖೆಯ ಡಿಎಫ್ಓ ಶ್ರೀಧರ್ ನೇತೃತ್ವದ ವಿಚಕ್ಷಣಾ ದಳ ಆರಂಭಿಸಿದೆ.

ಬೆಂಗಳೂರು (ಜೂ.30): ಸುವರ್ಣನ್ಯೂಸ್ಬಯಲು ಮಾಡಿದ್ದ ಅರಣ್ಯ ಇಲಾಖೆಯ ಗುಂಡಿ ಗೋಲ್ ಮಾಲ್ ಹಗರಣದ ತನಿಖೆಯನ್ನು ಇಂದಿನಿಂದ ಅರಣ್ಯ ಇಲಾಖೆಯ ಡಿಎಫ್ಓ ಶ್ರೀಧರ್ ನೇತೃತ್ವದ ವಿಚಕ್ಷಣಾ ದಳ ಆರಂಭಿಸಿದೆ.

ಸಾಗರ ಅರಣ್ಯ ವಿಭಾಗದ 19 ರೇಂಜ್ ಫಾರೆಸ್ಟ್ ನ ತಲಾ ಎರೆಡೆರಡು ಜಾಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಕಾರ್ಯ ಶುರುವಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರ ಸ್ವಕ್ಷೇತ್ರದಲ್ಲಿ ಪ್ರಭಾರ ಡಿಎಫ್ ಓ ಗೋಲ್ ಮಾಲ್ ಮೋಹನ್ ಗಂಗೊಳ್ಳಿ ಭ್ರಷ್ಟಾಚಾರವನ್ನು ಸುವರ್ಣನ್ಯೂಸ್ ಬಯಲು ಮಾಡುತ್ತಿದ್ದಂತೆ ಆರಣ್ಯಭವನದ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಭ್ರಷ್ಟಾಚಾರದ ತನಿಖೆಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದಿನಿಂದ ಅಧಿಕಾರಿ ಶ್ರೀಧರನ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣದಲ್ಲಿ ತೆಗೆದಿರುವ ಗಿಡ ನೆಡುವ ಗುಂಡಿಗಳ ಪರಿಶೀಲನೆ ನಡೆಸಲಾರಂಭಿಸಿದ್ದಾರೆ. 

ಸಾಗರ ತಾಲ್ಲೂಕಿನ ಚೋರಡಿ ರೇಂಜ್ , ಸಾಗರ ರೇಂಜ್ ಗಳಲ್ಲಿ ತನಿಖೆ ಆರಂಭಿಸಿರುವ ತನಿಖಾ ತಂಡ ಗುದ್ದಲಿ ಹಾಗೂ ಅಳತೆಯ ಸ್ಕೇಲ್​ ಹಿಡಿದು ಅರಣ್ಯ ಇಲಾಖೆಯಿಂದ ಗಿಡ ನೆಟ್ಟ ಜಾಗಗಳನ್ನು ಪರಿಶೀಲಿಸಿದಾಗ ಇಲಾಖೆಯ ಯೋಜನಾವೆಚ್ಚಕ್ಕೂ ಹಾಗೂ ಸ್ಥಳದಲ್ಲಿ ಮಾಡಿದ ಕೆಲಸಗಳಿಗೂ ಸಾಕಷ್ಟು ವ್ಯತ್ಯಾಸಗಳಿರುವುದು ಬಯಲಾಗುತ್ತಿದೆ. ಇಲಾಖೆಯ ನಿಯಮದ ಪ್ರಕಾರ 2 ಅಡಿ ಆಳ ಹಾಗೂ 2 ಅಡಿ ಅಗಲದ ಗುಂಡಿ ತೆಗೆಯಬೇಕಾಗಿದ್ದು 7 ಅಡಿ ಎತ್ತರದ ಗಿಡ ನೆಡಬೇಕಾಗಿದೆ. ಆದರೆ ಇಲ್ಲಿ ಕೇವಲ 8 ರಿಂದ 10 ಇಂಚು ಗುಂಡಿಗಳನ್ನು ತೆಗೆದಿರುವುದು, 1.5 ಅಡಿ ಎತ್ತರದ ಗಿಡಗಳನ್ನು ನೆಟ್ಟಿರುವುದು ಕಂಡು ಬಂದಿದೆ. ಅಲ್ಲದೆ ಗುಂಡಿ ತೆಗೆದಿರುವುದಕ್ಕೆ 31 ರೂ. 50 ಪೈಸೆ ಕೊಡಬೇಕಾದಲ್ಲಿ ಸ್ಥಳೀಯ ಕೂಲಿಕಾರರಿಗೆ 1 ಗುಂಡಿ ತೆಗೆಯಲು 4 ರಿಂದ 5 ರೂ ನೀಡಿ ಗಿಡ ನಡೆಸಲಾಗಿದೆ ಎಂದು ಸ್ಥಳದಲ್ಲಿಯೇ ಕೂಲಿಕಾರರು ವಿಚಕ್ಷಣಾ ದಳಕ್ಕೆ ದೂರಿದ್ದಾರೆ. ಇದರಿಂದಾಗಿ ಮೇಲ್ನೋಟಕ್ಕೆ ಅತ್ಯಂತ ದೊಡ್ಡ ಭ್ರಷ್ಟಾಚಾರ ನೆಡೆದಿರುವುದು ಸಾಬೀತಾಗಿದೆ. ಈಗಾಗಲೇ ಕಳೆದ ವಾರ ಅರಣ್ಯೀಕರಣದ ಲೂಟಿಯ ಖುದ್ದು ಪರಿಶೀಲನೆಗೆ ಸಾಗರ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಅಲ್ಲದೇ ತಾಪಂ ಸರ್ವಸದಸ್ಯರ ಸಭೆಯಲ್ಲಿ ಈ ಭ್ರಷ್ಟಾಚಾರ ಹಗರಣದ ಬಗ್ಗೆ ತನಿಖೆಗೆ ಆದೇಶಿಸುವಂತೆ ಒಂದೇ ಸಾಲಿನ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದೀಗ ವಿಜಿಲೆನ್ಸಿ ಟೀಮ್ ಸಾಗರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಸಾಗರ, ಸೊರಬ, ಅನವಟ್ಟಿ, ಶಿರಾಳಕೊಪ್ಪ, ಹೊಸನಗರ, ನಗರ, ಚೋರಡಿ, ಅಂಬ್ಲಿಗೊಳ, ಕಾರ್ಗಲ್ ಮತ್ತು ಶಿಕಾರಿಪುರ ಹೀಗೆ 10 ರೇಂಜ್ ಫಾರೆಸ್ಟ್ ಗಳಲ್ಲಿ ತನಿಖೆಯ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾರಂಭಿಸಿದೆ. .