ಬೆಂಗಳೂರು :  ಟೆಸ್ಟ್‌ ಡ್ರೈವ್‌ಗೆ ತೆರಳಿದ್ದ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ ಉದ್ಯಮಿಯೊಬ್ಬ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ನೈಸ್‌ ರಸ್ತೆಯ ಹೊಸಕೆರೆಹಳ್ಳಿ ಟೋಲ್‌ ಸಮೀಪ ನಡೆದಿದೆ.

ಗಿರಿನಗರ ನಿವಾಸಿ ಸಾಗರ್‌ (31) ಮೃತರು. ಘಟನೆಯಲ್ಲಿ ಸಾಗರ್‌ ಅವರ ಪತ್ನಿ ಸಂಧ್ಯಾ (28), ಪುತ್ರ ಸಮರ್ಥ (6), ಸಾಗರ್‌ ಸ್ನೇಹಿತ ಗೌತಮ್‌ ಹಾಗೂ ಶೋ ರೂಮ್‌ ಸಿಬ್ಬಂದಿ ಶಿವಕುಮಾರ್‌ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸಾಗರ್‌ ಅವರು ಸ್ವಂತ ವ್ಯವಹಾರ ಹೊಂದಿದ್ದು, ಪತ್ನಿ ಹಾಗೂ ಪುತ್ರನ ಜತೆ ಗಿರಿನಗರದಲ್ಲಿ ನೆಲೆಸಿದ್ದರು. ಗೌತಮ್‌, ಸಾಗರ್‌ ಅವರ ವ್ಯವಹಾರದ ಪಾಲುದಾರಿಕೆ ಹೊಂದಿದ್ದಾರೆ. ಸಾಗರ್‌ ಅವರು ಹೊಸೂರು ಮುಖ್ಯರಸ್ತೆಯಲ್ಲಿರುವ ರೂಪೇನ ಅಗ್ರಹಾರದಲ್ಲಿರುವ ‘ಮಾರ್ಕ್ ಲ್ಯಾಂಡ್‌’ ಶೋ ರೂಮ್‌ನಲ್ಲಿ ಎಸ್‌ಯುವಿ ರೇಂಜ್‌ ರೋವರ್‌ ಕಾರನ್ನು ಕೊಳ್ಳಲು ಪತ್ನಿ ಹಾಗೂ ಸ್ನೇಹಿತನ ಜತೆ ಹೋಗಿದ್ದರು. ಡೆಮೋ ಕಾರನ್ನು ಟೆಸ್ಟ್‌ ಡ್ರೈವ್‌ ಮಾಡಲು ಶೋ ರೂಮ್‌ ಸಿಬ್ಬಂದಿ ಜತೆ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ನೈಸ್‌ ರಸ್ತೆಗೆ ಬಂದಿದ್ದರು. ಈ ವೇಳೆ ಸಾಗರ್‌ ಟೆಸ್ಟ್‌ ಡ್ರೈವ್‌ ಮಾಡಿದ್ದು, ಹಿಂಬದಿ ಸೀಟಿನಲ್ಲಿ ಪತ್ನಿ, ಪುತ್ರ ಹಾಗೂ ಸ್ನೇಹಿತ ಕುಳಿತಿದ್ದರು. ಚಾಲಕನ ಪಕ್ಕದ ಸೀಟಿನಲ್ಲಿ ಶೋ ರೂಮ್‌ ಸಿಬ್ಬಂದಿ ಕುಳಿತಿದ್ದ. ಹೊಸಕೆರೆಹಳ್ಳಿ ಟೋಲ್‌ ಸಮೀಪ ಗೌತಮ್‌ ವೇಗವಾಗಿ ಕಾರು ಚಾಲನೆ ಮಾಡಿದ್ದಾರೆ. ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ, ಬಳಿಕ ಸುಮಾರು 30 ಅಡಿ ಅಳಕ್ಕೆ ಕಾರು ಬಿದ್ದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಗರ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.