ಬೆಂಗಳೂರು :  ಮೆಜೆಸ್ಟಿಕ್‌ನ ಮೆಟ್ರೋ ನಿಲ್ದಾಣದಲ್ಲಿ ಶಂಕಾಸ್ಪದವಾಗಿ ವರ್ತಿಸಿದ ವ್ಯಕ್ತಿ ರಾಜಸ್ಥಾನ ಮೂಲದವನಾಗಿದ್ದು, ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಬಾಂಧವರಿಂದ ದಾನ (ಝಕಾತ್‌) ಸ್ವೀಕಾರಕ್ಕೆ ಕುಟುಂಬ ಸಮೇತ ಆತ ನಗರಕ್ಕೆ ಆಗಮಿಸಿದ್ದಾನೆ. ಆತನ ಬಳಿ ಯಾವುದೇ ಅಪಾಯಕಾರಿ ವಸ್ತು ದೊರಕಿಲ್ಲ. ಭಾಷೆಯ ಸಮಸ್ಯೆಯಿಂದಾಗಿ ಆತನ ವರ್ತನೆ ಸಂಶಯಾಸ್ಪದವಾಗಿ ಕಂಡಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತರು, ರಾಜಸ್ಥಾನದ ಮೂಲದ ಸಾಜಿದ್‌ಖಾನ್‌ ಬಳಿ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ. ಮೆಟ್ರೋ ಬಳಿ ಭಾಷೆಯ ಸಮಸ್ಯೆಯಿಂದಾಗಿ ಖಾನ್‌ ಸಮಸ್ಯೆಗೆ ಸಿಲುಕಿದ್ದ ಎಂಬ ಸಂಗತಿ ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ ಎಂದು ಅವರು ಹೇಳಿದರು.

ಮುಸ್ಲಿಮರು ರಂಜಾನ್‌ ತಿಂಗಳಾಚರಣೆ ವೇಳೆ ಬಡವರಿಗೆ ದಾನ ಮಾಡುವ ಸಂಪ್ರದಾಯ ಆಚರಿಸುತ್ತಾರೆ. ಹೀಗಾಗಿ ಪ್ರತಿ ವರ್ಷದ ರಂಜಾನ್‌ ವೇಳೆ ತನ್ನ ಪತ್ನಿ ಮತ್ತು ಮಕ್ಕಳ ಜತೆ ಬೆಂಗಳೂರಿಗೆ ಬರುವ ಸಾಜಿದ್‌ಖಾನ್‌, ಪ್ರಮುಖ ಮಸೀದಿಗಳ ಬಳಿ ಭಿಕ್ಷಾಟನೆ ಮಾಡುತ್ತಿದ್ದ. ಅದರಂತೆ ಈ ಬಾರಿಯೂ ಕೂಡಾ ತನ್ನ ಕುಟುಂಬ ಜತೆ ಬಂದಿರುವ ಖಾನ್‌, ಕಾಟನ್‌ಪೇಟೆ ಸಮೀಪದ ಲಾಡ್ಜ್‌ನಲ್ಲಿ ವಾಸವಾಗಿದ್ದ ಎಂದು ಆಯುಕ್ತರು ವಿವರಿಸಿದರು.

ಮೆಟ್ರೋದಲ್ಲಿ ಪ್ರಯಾಣಿಸಿ ಆತನಿಗೆ ಗೊತ್ತಿರಲಿಲ್ಲ. ಭಾನುವಾರ ರಾತ್ರಿ 8ರ ಸುಮಾರಿಗೆ ಮಸೀದಿಗೆ ಹೋಗಲು ಮೆಟ್ರೋ ನಿಲ್ದಾಣಕ್ಕೆ ಬಂದ ಸಾಜಿದ್‌ಖಾನ್‌ನನ್ನು ಭದ್ರತಾ ಸಿಬ್ಬಂದಿ ತಸಾಪಣೆಗೊಳಪಡಿಸಿದ್ದರು. ಆ ವೇಳೆ ಆತನ ಜೇಬಿನಲ್ಲಿದ್ದ ಭಿಕ್ಷಾಟನೆಯಿಂದ ಸಂಪಾದಿಸಿದ ಚಿಲ್ಲರೆ ಕಾಸು ಹಾಗೂ ಸೊಂಟಕ್ಕೆ ಕಟ್ಟಿಕೊಂಡಿದ್ದ ತಾಯತಗಳಿಂದ ಲೋಹ ಪರಿಶೋಧಕ ಯಂತ್ರದಲ್ಲಿ ಬೀಪ್‌ ಶಬ್ದ ಮೊಳಗಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ, ಖಾನ್‌ಗೆ ಪಕ್ಕ ಸರಿದು ನಿಲ್ಲುವಂತೆ ಸೂಚಿಸಿದ್ದರು ಎಂದು ಆಯುಕ್ತರು ಹೇಳಿದರು.

ಬಳಿಕ ಖಾನ್‌ಗೆ ಜೇಬು ಮತ್ತು ಸೊಂಟದಲ್ಲಿರುವ ಲೋಹದ ವಸ್ತುಗಳ ಕುರಿತು ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆದರೆ ಅವರ ನಡುವೆ ಭಾಷೆಯ ಸಮಸ್ಯೆ ಉಂಟಾಗಿದೆ. ಖಾನ್‌ ಉರ್ದುನಲ್ಲಿ ಮಾತನಾಡುತ್ತಿದ್ದರಿಂದ ಮೆಟ್ರೋ ಸಿಬ್ಬಂದಿಗೆ ಅರ್ಥವಾಗಿಲ್ಲ. ಇತ್ತ ಕನ್ನಡ ಬಾರದ ಕಾರಣಕ್ಕೆ ಆತನಿಗೆ ಭದ್ರತಾ ಸಿಬ್ಬಂದಿ ಕೇಳಿದ ಪ್ರಶ್ನೆಗಳು ತಬ್ಬಿಬ್ಬಾಗುವಂತೆ ಮಾಡಿವೆ. ಇದರಿಂದ ಭಯಗೊಂಡ ಆತ ಅಲ್ಲಿಂದ ತೆರಳಿದ್ದ. ಈ ಸನ್ನಿವೇಶದ ಸಿಸಿಟಿವಿ ದೃಶ್ಯಾವಳಿಯು ಬಹಿರಂಗವಾಗಿ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು ಎಂದು ಮಾಹಿತಿ ನೀಡಿದರು.

ಶಂಕಾಸ್ಪದ ವ್ಯಕ್ತಿ ವದಂತಿ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್‌ ನೇತೃತ್ವದಲ್ಲಿ ಅನಾಮಧೇಯ ವ್ಯಕ್ತಿ ಪತ್ತೆಗೆ ತಂಡ ರಚಿಸಲಾಗಿತ್ತು. ಕೊನೆಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಸೋಮವಾರ ರಾತ್ರಿ ಆರ್‌.ಟಿ.ನಗರದ ಮಸೀದಿ ಬಳಿ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಯಿತು ಎಂದು ಆಯುಕ್ತ ಹೇಳಿದರು.

ಸಾಜಿದ್‌ಖಾನ್‌ ಪೂರ್ವಾಪರ ಕುರಿತು ಆಧಾರ್‌ ಕಾರ್ಡ್‌ ಹಾಗೂ ಮತದಾರ ಗುರುತಿನ ಪತ್ರ ಸೇರಿದಂತೆ ದಾಖಲೆ ಪರಿಶೀಲಿಸಿದ್ದೇವೆ. ಆತನ ಊರಿನ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಇದುವರೆಗೆ ಖಾನ್‌ ಮೇಲೆ ಅನುಮಾನ ಪಡುವ ಯಾವುದೇ ಅಂಶಗಳು ಪತ್ತೆಯಾಗಿಲ್ಲ.

-ಟಿ.ಸುನೀಲ್‌ ಕುಮಾರ್‌, ಪೊಲೀಸ್‌ ಆಯುಕ್ತ.