ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು, ಎಲ್'ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳು ರಾಷ್ಟ್ರಪತಿ ಸ್ಥಾನಕ್ಕೆ ಚಲಾವಣೆಯಲ್ಲಿವೆ. ಆದರೆ, ಆಡ್ವಾಣಿ ಮತ್ತು ಜೋಷಿ ಅವರ ಹೆಸರು ಬಾಬ್ರಿ ಪ್ರಕರಣದ ಆರೋಪಪಟ್ಟಿಯಲ್ಲಿ ಇರುವುದರಿಂದ ಅವರಿಬ್ಬರು ರಾಷ್ಟ್ರಪತಿಯಾಗುವ ಸಾಧ್ಯತೆ ಇಲ್ಲದಂತಾಗಿದೆ.
ನವದೆಹಲಿ(ಜೂನ್ 14): ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಮುಂದಿನ ರಾಷ್ಟ್ರಪತಿ ಆಗಲಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಎನ್'ಡಿಎ ಅಭ್ಯರ್ಥಿಯನ್ನಾಗಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎನ್ಎನ್ ವಾಹಿನಿಯು ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಇಟ್ಟುಕೊಂಡಿರುವ ಎಲ್ಲಾ ಮಾನದಂಡಗಳು ಸುಷ್ಮಾ ಅವರಿಗೆ ಸರಿಹೊಂದುತ್ತಿವೆ. ಜೊತೆಗೆ, ಆರೆಸ್ಸೆಸ್ ಕೂಡ ಸುಷ್ಮಾ ಉಮೇದುವಾರಿಕೆಗೆ ಓಕೆ ಎಂದಿದೆಯಂತೆ. ಎಲ್ಲಾ ಪಕ್ಷಗಳು ಸೇರಿ ಒಮ್ಮತದಿಂದ ರಾಷ್ಟ್ರಪತಿ ಆಯ್ಕೆ ಮಾಡಬೇಕೆಂಬ ಬಿಜೆಪಿ ಪ್ರಯತ್ನಕ್ಕೆ ಸುಷ್ಮಾ ಸ್ವರಾಜ್ ಸೂಕ್ತ ವ್ಯಕ್ತಿ ಆಗಬಹುದೆಂಬ ಲೆಕ್ಕಾಚಾರವೂ ಇದೆ. ಯಾಕೆಂದರೆ, ವಿಪಕ್ಷಗಳು ಸುಷ್ಮಾ ಸ್ವರಾಜ್ ಅವರನ್ನು ವಿರೋಧಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಈ ಸಂಬಂಧ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಅವರು ಜೂನ್ 16, ಶುಕ್ರವಾರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಮ್ಯೂನಿಸ್ಟ್ ಮುಖಂಡ ಸೀತಾರಾಮ್ ಯೆಚೂರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅದಾದ ಬಳಿಕ ಅಭ್ಯರ್ಥಿಯ ಹೆಸರನ್ನು ಎನ್'ಡಿಎ ಅಂತಿಮಗೊಳಿಸಲಿದೆ ಎಂದು ನ್ಯೂಸ್18 ವರದಿಯಲ್ಲಿ ಹೇಳಲಾಗಿದೆ.
ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು, ಎಲ್'ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಹೆಸರುಗಳು ರಾಷ್ಟ್ರಪತಿ ಸ್ಥಾನಕ್ಕೆ ಚಲಾವಣೆಯಲ್ಲಿವೆ. ಆದರೆ, ಆಡ್ವಾಣಿ ಮತ್ತು ಜೋಷಿ ಅವರ ಹೆಸರು ಬಾಬ್ರಿ ಪ್ರಕರಣದ ಆರೋಪಪಟ್ಟಿಯಲ್ಲಿ ಇರುವುದರಿಂದ ಅವರಿಬ್ಬರು ರಾಷ್ಟ್ರಪತಿಯಾಗುವ ಸಾಧ್ಯತೆ ಇಲ್ಲದಂತಾಗಿದೆ.
(ಮಾಹಿತಿ: ನ್ಯೂಸ್18)