ಚುನಾವಣಾ ಸಿದ್ಧತೆಯಲ್ಲಿರುವ ಕಾಂಗ್ರೆಸ್‌ಗೆ ಈ ಸುದ್ದಿ ನಿಜಕ್ಕೂ ಆಘಾತಕಾರಿ. ಮುಂದೆಯೂ ನಮ್ಮದೇ ಸರ್ಕಾರ ಎನ್ನುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆ ಉಂಟಾಗಿದೆ. ಎರಡನೇ ಬಾರಿ ಕಾಂಗ್ರೆಸ್ ನಡೆಸಿರುವ ಸರ್ವೆಯಲ್ಲಿ ಪಕ್ಷದ 30 ರಿಂದ 35 ಶಾಸಕರು ಸೋಲುತ್ತಾರೆ ಎಂಬ ವರದಿ ಕಾಂಗ್ರೆಸ್ ಗೆ ಆತಂಕ ಉಂಟು ಮಾಡಿದೆ.
ಬೆಂಗಳೂರು (ಅ.30): ಚುನಾವಣಾ ಸಿದ್ಧತೆಯಲ್ಲಿರುವ ಕಾಂಗ್ರೆಸ್ಗೆ ಈ ಸುದ್ದಿ ನಿಜಕ್ಕೂ ಆಘಾತಕಾರಿ. ಮುಂದೆಯೂ ನಮ್ಮದೇ ಸರ್ಕಾರ ಎನ್ನುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಆರಂಭದಲ್ಲೇ ಭಾರೀ ಹಿನ್ನಡೆ ಉಂಟಾಗಿದೆ. ಎರಡನೇ ಬಾರಿ ಕಾಂಗ್ರೆಸ್ ನಡೆಸಿರುವ ಸರ್ವೆಯಲ್ಲಿ ಪಕ್ಷದ 30 ರಿಂದ 35 ಶಾಸಕರು ಸೋಲುತ್ತಾರೆ ಎಂಬ ವರದಿ ಕಾಂಗ್ರೆಸ್ ಗೆ ಆತಂಕ ಉಂಟು ಮಾಡಿದೆ.
ಪಕ್ಷದ 30ರಿಂದ 35 ಹಾಲಿ ಶಾಸಕರಿಗೆ ಸೋಲು..!
ಮುಂದಿನ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಎಲ್ಲಾ ಪಕ್ಷಗಳು ಭರದ ಸಿದ್ಧತೆಯಲ್ಲಿ ತೊಡಗಿದ್ದು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಅದರಲ್ಲೂ ಆಡಳಿತರೂಡ ಕಾಂಗ್ರೆಸ್ ಮುಂದೆಯೂ ನಮ್ಮದೇ ಸರ್ಕಾರ ಎಂಬ ಭರವಸೆಯಲ್ಲಿ ಮಾತನಾಡುತ್ತಿದೆ. ಆದರೆ ಈ ಭರವಸೆ ಹುಸಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕಾಂಗ್ರೆಸ್ ಪಕ್ಷವೇ ಮಾಡಿಸಿರುವ ಎರಡನೇ ಸರ್ವೆಯಲ್ಲಿ 30ರಿಂದ 35 ಹಾಲಿ ಶಾಸಕರಿಗೆ ಸೋಲು ಎದುರಾಗಲಿದೆ ಎಂಬ ವರದಿ ಹೊರಬಿದ್ದಿದ್ದು ಕಾಂಗ್ರೆಸ್ಗೆ ಆತಂಕ ಎದುರಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಮಾಡಿಸಿದ್ದ ಚುನಾವಣಾ ಪೂರ್ವ ಸರ್ವೆಯಲ್ಲಿ ಹಾಲಿ ಶಾಸಕರ ಸೋಲಿನ ಬಗ್ಗೆ ವರದಿಯಾಗಿತ್ತು. ಈಗ ಕಾಂಗ್ರೆಸ್ ಮತ್ತೊಮ್ಮೆ ದೆಹಲಿ ಮೂಲದ ಸಂಸ್ಥೆಯಿಂದ 224 ಕ್ಷೇತ್ರಗಳಲ್ಲಿಎರಡನೇ ಬಾರಿ ಸರ್ವೆ ನಡೆಸಿದ್ದು ಅದರಲ್ಲೂ ಶಾಸಕರ ಭವಿಷ್ಯ ಬದಲಾಗಿಲ್ಲ. 30 ರಿಂದ 35 ಶಾಸಕರು ಸೋಲುತ್ತಾರೆ ಎಂಬ ಸುಳಿವು ನೀಡಿದೆ. ಜೊತೆಗೆ ಕಾಂಗ್ರೆಸ್ ಗೆ 80 ರಿಂದ 90 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಎಚ್ಚೆತ್ತುಕೊಳ್ಳುವಂತೆ ಶಾಸಕರಿಗೆ ಪರಮೇಶ್ವರ್ ಫುಲ್ ಕ್ಲಾಸ್
2ನೇ ಸಮೀಕ್ಷೆ ವರದಿ ಹೊರಬೀಳುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೋಲುವ ಶಾಸಕರನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಳ್ಳಿ, ಎಲ್ಲಿ ತಪ್ಪಾಗಿದೆ ಸರಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಅಂತ ಅಂತ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ..?
ಈಗ ಕಾಂಗ್ರೆಸ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 80 ರಿಂದ 90 ಸ್ಥಾನ ಸಿಗುವ ಸಾಧ್ಯತೆ ಇದ್ದು ಸರ್ಕಾರ ರಚನೆಗೆ ಬಹುಮತ ಪಡೆಯುವುದು ಅಸಾಧ್ಯ. ಹೀಗಾಗಿ ಜೆಡಿಎಸ್ ನೊಂದಿಗೆ ಮೈತ್ರಿ ಬೆಳೆಸುವ ಸಾಧ್ಯತೆ ದಟ್ಟವಾಗಿದ್ದು ಜೆಡಿಎಸ್ ಕಿಂಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಲದೆ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ತೀವ್ರ ನಿರಾಸೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ತಾವೇ ಮಾಡಿಸಿರುವ ಸರ್ವೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಸುಳಿವು ಗೊತ್ತಾಗಿದ್ದು ಗೆಲುವಿಗಾಗಿ ಪರ್ಯಾಯ ತಂತ್ರದ ಮೊರೆ ಹೋಗಿದೆ.
