ನವದೆಹಲಿ (ಸೆ.29): ಗಡಿ ನಿಯಂತ್ರಣ ರೇಖೆಯಲ್ಲಿ ಅಡಗಿದ್ದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿದ ಬೆನ್ನಲ್ಲೇ ಇಂಡೋ-ಪಾಕ್ ಗಡಿ ಉದ್ವಿಗ್ನಗೊಂಡಿದ್ದು, ಗಡಿ ವ್ಯಾಪ್ತಿಯ ಸುಮಾರು 10 ಕಿ.ಮೀ ಪ್ರದೇಶವನ್ನು ಖಾಲಿ ಮಾಡಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಜನಾಥ್ ಸಿಂಗ್ ಕರೆ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಗಡಿಯಿಂದ ಸುಮಾರು 10 ವ್ಯಾಪ್ತಿಯಲ್ಲಿ ಜನರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಅಲ್ಲದೆ ಗಡಿಯುದ್ದಕ್ಕೂ ಕಟ್ಟೆಚ್ಚರವಹಿಸುವಂತೆ ಸೇನಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಗಡಿ ಭಾಗದಲ್ಲಿರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯೋಧರಿಗಿದ್ದ ರಜೆಯನ್ನು ರದ್ದು ಮಾಡಲಾಗಿದೆ.
ಇಂಡೋ - ಪಾಕ್ ಗಡಿಗೆ ಹೆಚ್ಚುವರಿ ಸೇನಾಪಡೆ
ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿರುವಂತೆಯೇ ಇಂಡೋ-ಪಾಕ್ ಗಡಿಗೆ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಪಂಜಾಬ್ ಭಾಗದ ಗಡಿಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ.
ಏಕೆಂದರೆ ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿ ತೋರಬಹುದು. ಭಾರತದ ಮೇಲೆ ಪ್ರತಿದಾಳಿ ನಡೆಸಲು ಸಂಚು ರೂಪಿಸಬಹುದು ಹೀಗಾಗಿ ಹೆಚ್ಚುವರಿ ಸೇನಾಪಡೆಯನ್ನು ಗಡಿ ಭಾಗಕ್ಕೆ ರವಾನಿಸಲಾಗಿದೆ.
