ಬೆಂಗಳೂರು :  ‘ಚುನಾವಣಾ ಪ್ರಚಾರದ ಕೊನೆಯ ದಿನ ಕೈಕೊಡಲೆಂದೇ ಬಿಜೆಪಿಗೆ ಸೇರಿ, ಅಭ್ಯರ್ಥಿಯಾಗಿ ಇಂದು ಕೈಕೊಟ್ಟಿರುವ ವ್ಯಕ್ತಿ ಈತ’ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಶಾಸಕ ಎಸ್‌.ಸುರೇಶ್‌ಕುಮಾರ್‌ ಅವರು ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ ಸೇರಿದ ಎಲ್‌.ಚಂದ್ರಶೇಖರ್‌ ವಿರುದ್ಧ ಹರಿಹಾಯ್ದಿದ್ದಾರೆ.

ನಡುನೀರಿನಲ್ಲಿ ಪಕ್ಷದ ಅಸಂಖ್ಯಾತ ಕಾರ್ಯಕರ್ತರನ್ನು ಕೈಬಿಟ್ಟಿರುವುದು ಕಾಂಗ್ರೆಸ್‌ ಪ್ರಲೋಭನೆಗೆ ಸಿಕ್ಕಿಬಿದ್ದಿರುವ ಈ ಪಲಾಯನವಾದಿಯ ಕೃತ್ಯ ಎಂಬುದು ಸತ್ಯ. ಬಿಜೆಪಿ ಕಾರ್ಯಕರ್ತರನ್ನು ವೇದನೆಗೆ ತಳ್ಳಿ ತನ್ನ ವೈಯಕ್ತಿಕ ಲಾಭಕ್ಕೆ ಚುನಾವಣಾ ಕಣದಿಂದ ಪಲಾಯನ ಮಾಡಿದ್ದಾರಷ್ಟೇ. ಇಂತಹ ಪ್ರಭೃತಿಯನ್ನು ಪೂರ್ಣ ನಂಬಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಮಾಡಿದ್ದು ನಮ್ಮ ತಪ್ಪು. ಈಗಲಾದರೂ ನಾವು ಇದೊಂದು ಎಚ್ಚರಿಕೆಯ ಪಾಠ ಎಂಬುದನ್ನು ಕಲಿಯಬೇಕು. ನಮ್ಮ ಕಾರ್ಯಕರ್ತರನ್ನೇ ಬೆಳೆಸಿ ಚುನಾವಣಾ ಅಭ್ಯರ್ಥಿಗಳನ್ನಾಗಿಸಬೇಕು. ಗೆದ್ದರೂ ನಮ್ಮ ಕಾರ್ಯಕರ್ತರೇ ಗೆಲ್ಲಲಿ. ಸೋತರೂ ನಮ್ಮ ಕಾರ್ಯಕರ್ತರ ನೈತಿಕ ಸ್ಥೈರ್ಯ ಉಡುಗದಂತಾಗದಿರಲಿ. ಎರವಲು ಎಂಬುದಕ್ಕೆ ಪೂರ್ಣ ತಿಲಾಂಜಲಿ ಇಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾನಾಗಿಯೇ ಬಿಜೆಪಿಗೆ ಬಂದು ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್‌ ಪಾಳ್ಯಕ್ಕೆ ಸೇರಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವ ಮಹಾನ್‌ ವ್ಯಕ್ತಿ ‘ನಾನು ಮೂಲತಃ ಕಾಂಗ್ರೆಸ್ಸಿಗ. ಟಿಕೆಟ್‌ಗಾಗಿ ಬಿಜೆಪಿ ಸೇರಿದ್ದೆ’ ಎಂದು ಈಗ ನಾಚಿಕೆ ಇಲ್ಲದೆ ಹೇಳಿದ್ದಾರೆ. ಯುದ್ಧಭೂಮಿಯಿಂದ ಪಲಾಯನ ಮಾಡಿರುವ ಈ ವ್ಯಕ್ತಿಯ ಯಾರೂ ಪ್ರಚಾರಕ್ಕೆ ಬರಲಿಲ್ಲ ಎಂಬ ಆರೋಪ ಮತ್ತು ಬಿಜೆಪಿಗೆ ಕೈ ಕೊಟ್ಟಿದ್ದಕ್ಕೆ ನೀಡಿರುವ ಕಾರಣ ನೂರಕ್ಕೆ ನೂರು ಸುಳ್ಳು ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ದಿನಗಳಿಂದ ನಾನು ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರ ಜೊತೆಗೂಡಿ ಪಾಲ್ಗೊಂಡಿದ್ದೇನೆ. ನಾನು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿಯೂ ಬಂದಿದೆ. ಪ್ರಚಾರ ಕಾರ್ಯದ ಸಂದರ್ಭದಲ್ಲಿ ಊರ ಅನೇಕ ಪ್ರಮುಖರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ವಕೀಲರ ಸಂಘ, ಕೆಲವು ಉದ್ದಿಮೆಗಳು, ಫ್ಯಾಕ್ಟರಿ ಕಾರ್ಮಿಕರು, ವೈದ್ಯರು, ಶಿಕ್ಷಣ ಸಂಸ್ಥೆಗಳು ಹೀಗೆ ಎಲ್ಲಾ ವರ್ಗದ ಮತದಾರರನ್ನೂ ಭೇಟಿ ಮಾಡಿದ್ದೇನೆ. ಕೇಂದ್ರ ಸಚಿವ ಸದಾನಂದಗೌಡರೂ ಪ್ರಚಾರ ಸಭೆಗಳÜಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಕಾರ್ಯಯೋಜನೆ ಕುರಿತು ಮಾತನ್ನಾಡಿದ್ದಾರೆ. ಜಿಲ್ಲಾಧ್ಯಕ್ಷ ರುದ್ರೇಶ್‌ ಅವರು ಈ ಪಲಾಯನವಾದಿಯ ಜೊತೆ ಜೊತೆಗೇ ಮತಯಾಚನೆಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸುರೇಶ್‌ಕುಮಾರ್‌ ವಿವರಿಸಿದ್ದಾರೆ.