ನವದೆಹಲಿ (ಆ. 29): ವಿಶ್ವಪ್ರಸಿದ್ಧ ತಾಜ್‌ಮಹಲ್‌ ಸಂರಕ್ಷಣೆಗೆ ದೃಷ್ಟಿಕೋನ ವರದಿ (ವಿಷನ್‌ ಡಾಕ್ಯುಮೆಂಟ್‌) ಸಿದ್ಧಪಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದೇ ವೇಳೆ, ತಾಜ್‌ ಟ್ರಾಪಿಸಿಯಂ ವಲಯ(ಟಿಟಿಜಡ್‌) ಮತ್ತು ಅಲ್ಲಿನ ಕೈಗಾರಿಕೆಗಳ ಮಾಲಿನ್ಯದಂತಹ ವಿಷಯಗಳನ್ನು ವರದಿಯಲ್ಲಿ ಪರಿಗಣಿಸಬೇಕೆಂದು ವರದಿಯಲ್ಲಿ ಕೋರ್ಟ್‌ ಸೂಚಿಸಿದೆ. 10,400 ಚದರ ಕಿ.ಮೀ. ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್‌, ಹತ್ರಾಸ್‌, ಇಟಾ ಮತ್ತು ರಾಜಸ್ಥಾನದ ಭರತ್‌ಪುರ ಜಿಲ್ಲೆಗಳಲ್ಲಿನ 10,400 ಚ.ಕಿ.ಮೀ. ವಿಸ್ತಾರದಲ್ಲಿ ಟಿಟಿಜಡ್‌ ಇದೆ.

ಒಂದು ಬಾರಿ ತಾಜ್‌ ನಾಶವಾದರೆ, ನಿಮಗೆ ಮತ್ತೊಂದು ಅವಕಾಶ ಸಿಗಲಾರದು ಎಂದು ನ್ಯಾ. ಮದನ್‌ ಲೋಕುರ್‌ ನ್ಯಾಯಪೀಠ ಎಚ್ಚರಿಸಿದೆ.

ಈ ನಡುವೆ, ಕೋರ್ಟ್‌ಗೆ ಹೇಳಿಕೆ ನೀಡಿದ ಸರ್ಕಾರ, ಆಗ್ರಾವನ್ನು ಪರಂಪರಾ ನಗರ ಎಂದು ಘೋಷಿಸುವ ಪ್ರಸ್ತಾಪ ರವಾನಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಸೂಚಿಸಲಾಗಿದೆ ಎಂದಿದೆ. ಇನ್ನು ತಿಂಗಳೊಳಗೆ ಕೇಂದ್ರದ ಸೂಚನೆಗೆ ಪ್ರತಿಕ್ರಿಯಿಸಲಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರ ಇದೇ ವೇಳೆ ಕೋರ್ಟ್‌ಗೆ ಮಾಹಿತಿ ನೀಡಿದೆ.