ನ್ಯಾಯಾಂಗ ನಿಂದನೆ ಆರೋಪದಡಿ ನಿನ್ನೆ ಬಂಧಿತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಕಳೆದ ತಿಂಗಳು ಸುಪ್ರೀಂಕೋರ್ಟ್'ನ ಮತ್ತೊಂದು ಪೀಠವು ತಮಗೆ ಜೈಲು ಶಿಕ್ಷೆಯನ್ನು ವಜಾಗೊಳಿಸುವಂತೆ ಅವರು ಮಾಡಿಕೊಂಡ ಮನವಿಯನ್ನೂ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ನವದೆಹಲಿ(ಜೂನ್ 21): ನ್ಯಾಯಾಂಗ ನಿಂದನೆ ಆರೋಪದಡಿ ನಿನ್ನೆ ಬಂಧಿತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಕರ್ಣನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಕಳೆದ ತಿಂಗಳು ಸುಪ್ರೀಂಕೋರ್ಟ್'ನ ಮತ್ತೊಂದು ಪೀಠವು ತಮಗೆ ಜೈಲು ಶಿಕ್ಷೆಯನ್ನು ವಜಾಗೊಳಿಸುವಂತೆ ಅವರು ಮಾಡಿಕೊಂಡ ಮನವಿಯನ್ನೂ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಮಾಜಿ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿಎಸ್ ಕರ್ಣನ್ ಅವರು 6 ತಿಂಗಳು ಜೈಲುಶಿಕ್ಷೆ ಅನುಭವಿಸಲೇಬೇಕೆಂದು ಸುಪ್ರೀಂಕೋರ್ಟ್ ಇಂದು ಮಂಗಳವಾರ ಆದೇಶಿಸಿದೆ.

41 ದಿನಗಳ ಬಳಿಕ ಸೆರೆ:
ಜೈಲು ಶಿಕ್ಷೆಗೀಡಾದ ದೇಶದ ಮೊದಲ ಹಾಲಿ ನ್ಯಾಯಾಧೀಶ ಎಂಬ ಅಪಖ್ಯಾತಿಗೆ ಪಾತ್ರರಾಗಿರುವ ನಿ. ನ್ಯಾ| ಸಿ.ಎಸ್‌. ಕರ್ಣನ್‌ ಅವರನ್ನು 41 ದಿನಗಳ ನಾಪತ್ತೆ ನಂತರ ಬಂಧಿಸುವಲ್ಲಿ ಕೋಲ್ಕತಾ ಹಾಗೂ ತಮಿಳುನಾಡು ಪೊಲೀಸರು ನಿನ್ನೆ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಕರ್ಪಗಂ ಕಾಲೇಜಿನ ಅತಿಥಿಗೃಹದಲ್ಲಿ ಮಂಗಳವಾರ ಅವರನ್ನು ಬಂಧಿಸಲಾಗಿದೆ.

ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರನ್ನು ನಿಂದಿಸಿ ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ಕರ್ಣನ್‌'ಗೆ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಮೇ 9ರಂದು 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅಂದಿನಿಂದಲೇ ಅವರು ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ತಮಿಳುನಾಡಿಗೆ ಆಗಮಿಸಿದ್ದ ಕೋಲ್ಕತಾ ಸಿಐಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ ಕರ್ಣನ್‌, ಕೊನೆಗೂ ಕೊಯಮತ್ತೂರಿನಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

‘ಕರ್ಣನ್‌ ಅವರ ಮೊಬೈಲ್‌ ಸಂಕೇತ ಆಧರಿಸಿ 3 ದಿನಗಳಿಂದ ಅವರಿಗಾಗಿ ಬಂಗಾಳ ಸಿಐಡಿ ಪೊಲೀಸರ ಮೂರು ತಂಡಗಳು ಕೊಯ ಮತ್ತೂರಲ್ಲಿ ತಲಾಶೆಯಲ್ಲಿದ್ದವು. ವಕೀಲರ ಜತೆ ಕರ್ಣನ್‌ ತಂಗಿದ್ದರು. ವಕೀಲರು ಸೋಮವಾರ ಚೆನ್ನೈಗೆ ನಿರ್ಗಮಿಸಿದಾಗ ಸಮಯ ಸಾಧಿಸಿ ಬಂಧಿಸಲಾಯಿತು. ತಮಿಳುನಾಡು ಪೊಲೀಸರು ಇವರಿಗೆ ತಾಂತ್ರಿಕ ಸಹಕಾರ ನೀಡಿದರು' ಎಂದು ಮೂಲಗಳು ಹೇಳಿವೆ.

‘3 ದಿನದ ಹಿಂದಷ್ಟೇ ಅವರು ಕೊಯಮತ್ತೂರಿಗೆ ಆಗಮಿಸಿದ್ದರು' ಎಂದು ಅವರ ವಕೀಲ ಮ್ಯಾಥ್ಯೂಸ್‌ ನೆಡುಂಪಾರ ದೃಢಪಡಿಸಿದ್ದಾರೆ. ಆದರೆ ಇದಕ್ಕಿಂತಲೂ ಮುನ್ನ ಅವರು ಕೇರಳದ ಕೊಚ್ಚಿಯ ಪಂನಂಗಡ್‌ ಅತಿಥಿಗೃಹದಲ್ಲಿ ಅವಿತಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ.

ಇಂದು ಬುಧವಾರ ವಿಮಾನದಲ್ಲಿ ಕರ್ಣನ್‌'ರನ್ನು ಕೋಲ್ಕತಾ ಪೊಲೀಸರು ಚೆನ್ನೈ ಮಾರ್ಗವಾಗಿ ಕೋಲ್ಕತಾಗೆ ಕರೆದೊಯ್ಯಲಿದ್ದಾರೆ. ಅಲ್ಲಿನ ಪ್ರೆಸಿಡೆನ್ಸಿ ಜೈಲಿನಲ್ಲಿ ಅವರನ್ನು ಬಂಧಿಯಾಗಿ ಇಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಕರಣ ಏನು?: ಮೊದಲು ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ನ್ಯಾ| ಸಿ.ಎಸ್‌. ಕರ್ಣನ್‌ ಬಳಿಕ ಕೋಲ್ಕತಾ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು. ಜನವರಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದರು.

ಪತ್ರದಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌'ನ ಕೆಲವು ನ್ಯಾಯಾಧೀಶರ ವಿರುದ್ಧ ಲಂಚಗುಳಿತನದ ಆರೋಪ ಹೊರಿಸಿ ತನಿಖೆಗೆ ಆಗ್ರಹಿಸಿದ್ದರು. ಈ ಪತ್ರ ಬಹಿರಂಗವಾಗುವ ಮೂಲಕ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಅವರು ಗುರಿಯಾದರು. ಸುಪ್ರೀಂ ಕೋರ್ಟು ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಅವರ ವಿರುದ್ಧ ದಾಖಲಿಸಿಕೊಂಡಿತು.

ಮೊಕದ್ದಮೆಯ ವಿಚಾರಣೆಗೆ ಮೊದಲು ಹಾಜರಾಗದ ಕರ್ಣನ್‌ ನಂತರ ಹಾಜರಾದರೂ ಆದೇಶ ಪಾಲನೆ ನಿರಾಕರಿಸಿದರು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ 7 ನ್ಯಾಯಾಧೀಶರಿಗೇ ಜೈಲು ಶಿಕ್ಷೆ ವಿಧಿಸಿ ‘ಆದೇಶ' ಹೊರಡಿಸಿದರು. ತಾವು ದಲಿತ ಎಂಬ ಕಾರಣಕ್ಕೆ ಬಲಿಪಶು ಮಾಡಲಾಗುತ್ತಿದೆ ಎಂದು ಬಹಿರಂಗ ಆರೋಪ ಮಾಡಿದರು. ಈ ಹಿನ್ನೆಲೆಯಲ್ಲಿ ಕಳೆದ ಮೇ 9ರಂದು ಸುಪ್ರೀಂ ಕೋರ್ಟು ನ್ಯಾ| ಕರ್ಣನ್‌ಗೆ 6 ತಿಂಗಳ ಸೆರೆವಾಸ ವಿಧಿಸಿ ಆದೇಶ ಹೊರಡಿಸಿತು. ಇದರೊಂದಿಗೆ ‘ಜೈಲು ಶಿಕ್ಷೆಗೀಡಾದ ಮೊದಲ ಹಾಲಿ ಹೈಕೋರ್ಟ್‌ ನ್ಯಾಯಾಧೀಶ' ಎಂಬ ಅಪಖ್ಯಾತಿ ಪಡೆದರು. ಆದರೆ, ಅಂದಿನಿಂದ ನ್ಯಾ| ಕರ್ಣನ್‌ ನಾಪತ್ತೆಯಾಗಿದ್ದರು. ಜೂನ್‌ 12ರಂದು ಅವರು ನಾಪತ್ತೆಯಾದ ಅವಧಿಯಲ್ಲೇ ಸೇವಾ ನಿವೃತ್ತಿ ಹೊಂದಿ, ‘ಗೈರಿನಲ್ಲಿ ನಿವೃತ್ತರಾದ ಮೊದಲ ನ್ಯಾಯಾಧೀಶ' ಎಂಬ ಕುಖ್ಯಾತಿಗೆ ಪಾತ್ರರಾದರು.
ಒಟ್ಟಾರೆ ಈ ಪ್ರಕರಣದಿಂದ ನ್ಯಾಯಾಂಗ ತೀವ್ರ ಮುಜುಗರ ಅನುಭವಿಸಿತ್ತು.

ಏನಿದು ಪ್ರಕರಣ?
* ಮದ್ರಾಸ್‌ ಹೈಕೋರ್ಟ್‌ನ ಕೆಲವು ನ್ಯಾಯಾಧೀಶರ ವಿರುದ್ಧ ಲಂಚ ಆರೋಪ ಮಾಡಿ ಮೋದಿಗೆ ಪತ್ರ
* ಈ ಬಗ್ಗೆ ಸುಪ್ರೀಂ ಕೆಂಗಣ್ಣು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲು. ವಿಚಾರಣೆಗೆ ಗೈರು
* ಬಳಿಕ ಹಾಜರಾದರೂ ಸುಪ್ರೀಂ ಆದೇಶ ಪಾಲನೆಗೆ ನಿರಾಕರಣೆ. ಸುಪ್ರೀಂಕೋರ್ಟ್‌ ಜಡ್ಜ್‌ಗಳಿಗೇ ಜೈಲು ಶಿಕ್ಷೆ ವಿಧಿಸಿ ಆದೇಶ
* ಅಲ್ಲದೆ, ತಾವು ದಲಿತರಾದ ಕಾರಣ ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪ
* ಮೇ 9ರಂದು ಕರ್ಣನ್‌ಗೆ 6 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿದ ಸುಪ್ರೀಂ. ಇದರ ಬೆನ್ನಲ್ಲೇ ನ್ಯಾ|ಕರ್ಣನ್‌ ನಾಪತ್ತೆ
* ಜೂ.12ರಂದು ಜಡ್ಜ್‌ ನಿವೃತ್ತಿ. ನಿನ್ನೆ ಕಡೆಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲು ಪೊಲೀಸರು ಯಶಸ್ವಿ