ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿಲ್ಲವೇ?

Supreme Court Retired judge J Chalameshwar interview with private channel
Highlights

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರು ನ್ಯಾಯಾಧೀಶರು ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯನ್ಯಾಯಮೂರ್ತಿಗಳ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದರು. ಈ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದವರು ನ್ಯಾ| ಚಲಮೇಶ್ವರ್. ಅವರು ನಿವೃತ್ತಿ ಬಳಿಕ ‘ಎನ್‌ಡಿಟೀವಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ! ಚಲಮೇಶ್ವರ್ ಮೊದಲ ಬಾರಿಗೆ ಖಾಸಗಿ ಚಾನಲ್’ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ನ್ಯಾಯಾಂಗ ಕಾರ್ಯ ವೈಖರಿ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ. 

ಸುಪ್ರೀಂಕೋರ್ಟ್ ಹಿಂದೆ ಏನು ನಡೆಯುತ್ತದೆ ಎಂದು ಪುಸ್ತಕ ಬರೆಯುವ ಯೋಚನೆ ಇದೆಯೇ? ಅಥವಾ ಇತರೆ ಸರ್ಕಾರಿ ಕೆಲಸ ಮಾಡುತ್ತೀರಾ?

ಇಲ್ಲ. ನಾನು ಒಂದು ವರ್ಷದ ಹಿಂ ದೆಯೇ ಯಾವುದೇ ಸರ್ಕಾರಿ ಕೆಲಸವನ್ನು ಒಪ್ಪಿಕೊಳ್ಳಲ್ಲ ಎಂದು ಹೇಳಿದ್ದೆ. ಬರವಣಿಗೆ ನನ್ನ ಆಯ್ಕೆ. ಹಾಗಾಗಿ ಬರವಣಿಗೆಗೆ ಯತ್ನಿಸುತ್ತೇನೆ.ಗಂಭೀರವಾಗಿದ್ದೇನಾದರೂ ಬರೆಯಬೇಕೆಂ ದುಕೊಂಡಿದ್ದೇನೆ. ಪ್ರಸ್ತುತ ಅಸ್ಥಿರತೆಗಿಂತ ಗಂಭೀರ ವಾದ ಸುಪ್ರೀಂ ಕೋರ್ಟ್ ಪಾತ್ರ, ಸುಸ್ಥಿರ ಪ್ರಜಾಪ್ರಭುತ್ವ, ಅದರ ಅಪಾಯಗಳ ಕುರಿತು ಬರೆಯುವ ಅಗತ್ಯವಿದೆ.

ಪತ್ರಿಕಾ ಗೋಷ್ಠಿಗೆ ಕಾರಣವೇನು? ಪ್ರಚೋದನೆ ಏನು?
ಪ್ರಚೋದನೆ ಏನೂ ಇಲ್ಲ. ಇದು ಬಹಳಷ್ಟು ಸಂಗತಿಗಳ ಪರಾಕಾಷ್ಠೆ. ವಾಸ್ತವವಾಗಿ ನಾವು ಪತ್ರಿಕಾಗೋಷ್ಠಿಗೆ ಮೊದಲೇ ಮಾಧ್ಯಮಗಳಿಗೆ ಹಸ್ತಾಂತರಿಸಿದ ಪತ್ರಪರಿಶೀಲಿಸಿದರೆ, ಏನು ನಡೆಯುತ್ತಿದೆಯೋ ಅದನ್ನೇ ಆಗಲೂ ಹೇಳಿದ್ದೆವು. ಆದರೆ ನಾವದನ್ನು ತೃಪ್ತಿದಾಯಕವಾಗಿ ಪರಿಹರಿಸಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ನ್ಯಾಯಾಧೀಶರು ಸಾರ್ವಜನಿಕರೆದುರು ಹೋಗಲ್ಲ. ಜೊತೆಗೆ ಕೆಲ ನಿವೃತ್ತ ನಾಯಾಧೀಶರೂ ಈ ಕುರಿತು ಮಾತನಾಡುತ್ತಾ, ಯಾಕೆ ಪೂರ್ಣ ಸಭೆ ಕರೆದು ಸಮಸ್ಯೆ ಪರಿಹರಿಸಬಾರದು ಎಂದು ಸಲಹೆ ನೀಡಿದ್ದರು. ಆದರೆ ನವೆಂಬರ್‌ನಲ್ಲಿಯೇ ಹೇಳಿದ್ದಾಗ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ.

ಆಗ ಪರಿಹಾರ ಏನು? ನ್ಯಾಯಾಲಯದ ಹೊರಗೆ ಕುಳಿತು ಈ ರೀತಿ ಹೇಳುವುದು ಸೂಕ್ತವೇ?

ನಾವೇನು ಮಕ್ಕಳಲ್ಲ. ನಾವೇನು ಪ್ರಚಾರಕ್ಕಾಗಿ ಪತ್ರಿಕಾಗೋಷ್ಠಿ ಕರೆದಿಲ್ಲ. ನಮಗೆ ಜನರ ಜವಾಬ್ದಾರಿ ಇದೆ. ನಾವೂ ಜನಸಾಮಾನ್ಯರೇ. ಆಗ ಜನರೇ ಇದಕ್ಕೂ ಮೊದಲೇ ಸಮಸ್ಯೆಯ ಪರಿಹಾರಕ್ಕೆ ಏಕೆ ಯತ್ನಿಸಲಿಲ್ಲ ಎಂದುಕೊಳ್ಳುವುದಿಲ್ಲವೇ?

ಪತ್ರಿಕಾಗೋಷ್ಠಿ ಬಗ್ಗೆ ಈಗ ಪಶ್ಚಾತಾಪವಾಗುತ್ತಿದೆಯೇ?

ಇಲ್ಲ. ನಾನು ಮಾಡಿದ್ದು ಸರಿ ಎಂಬ ನಂಬಿಕೆ ನನಗಿದೆ. 

ಆದರೆ ನ್ಯಾಯಾಧೀಶರು ತಮ್ಮ ತಮ್ಮೊಳಗೇ ಕಚ್ಚಾಡುತ್ತಿದ್ದಾರೆಂದು ಸಾಮಾನ್ಯ ಜನರು ಭಾವಿಸಿದ್ದಾರಲ್ಲಾ?

ಯಾರು ಆ ಸಾಮಾನ್ಯ ಜನರು ಅದನ್ನು ಹೇಳಿ. ನಾವು ಆ ಬಗ್ಗೆ ಮಾತನಾಡಲು ಆರಂಭಿಸಿದಾಗ ಸಾಕಷ್ಟು ಜನರು ಇಂಟರ್‌ನೆಟ್ನಲ್ಲಿ ಬರೆಯಲು ಪ್ರಾರಂಭಿಸಿದ್ದರು. ಕಟುವಾಗೇ ಧ್ವನಿ ಎತ್ತಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಈಗ ಎಲ್ಲಾ ಸರಿಯಿದೆಯೇ?
ಸುಪ್ರೀಂಕೋರ್ಟ್‌ನಲ್ಲಿ ಎಲ್ಲಾ ಸರಿ ಎಂದು ಹೇಳಲಾರೆ. ನಾವು ಕೆಲ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೆವು. ಎಲ್ಲಾ ಸರಿ ಹೊಂದಲು ಸಮಯ ಬೇಕು. ನಿಮಗೇ ವಾಸ್ತವಾಂಶ ತಿಳಿದಿದೆ.

ಆದರೆ, ಕೇಸುಗಳ ಹಂಚಿಕೆಯನ್ನು ಬಹುತೇಕ ಹಿರಿಯ ನ್ಯಾಯಾಧೀಶರೇ ನಿರ್ವಹಿಸಬೇಕು ಎಂದು ನೀವು ಬಯಸಿದ್ದೀರಿ. ಸರದಿ ರೋಸ್ಟರ್ ಪದ್ಧತಿಯಲ್ಲಿ ತಪ್ಪೇನಿದೆ?
ನಾನು ಇನ್ನೊಬ್ಬರ ಖಾಸಗಿತನವನ್ನು ನಾಶ ಮಾಡಲು ಬಯಸುವುದಿಲ್ಲ. ಆದರೆ, ಅದೇ ಸಮಸ್ಯೆಯಾಗಿದೆ. ಯಾವುದೇ ತಪ್ಪು ಕಂಡು ಬಂದಲ್ಲಿ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಹಾಗಂತ ಅದನ್ನು ಹೇಳಿಕೊಳ್ಳದೇ ಇರಲೂ ಆಗುವುದಿಲ್ಲ. ಇನ್ನೂ ಸಾಕಷ್ಟು ಸಾಧಿಸವುದು ಬಾಕಿ ಇದೆ. ಯಾವುದೇ ಸಮಸ್ಯೆಯೂ ಪರಿಹಾರವಾಗಿಲ್ಲ.
 

ನಿಮ್ಮ ಅಸಮಾಧಾನಕ್ಕೆ ಕಾರಣವಾಗಿದ್ದ ಪ್ರಕರಣಗಳಲ್ಲಿ ನ್ಯಾ|ಲೋಯಾ ಪ್ರಕರಣವೂ ಒಂದು. ಈ ಪ್ರಕರಣದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದೇಕೆ? ಈ ಪ್ರಕರಣವನ್ನು ಮರುದಿನವೇ ಇನ್ನೊಬ್ಬರಿಗೆ ವಹಿಸಿದ್ದರಿಂದಲೇ?
ಏನಾಯಿತು ಎಂದು ನನಗೆ ಗೊತ್ತಿಲ್ಲ. ಆ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಾನು ಬಯಸಿರಲಿಲ್ಲ. ನ್ಯಾಯಾಂಗದ ವಿವಾದ ಈ ಪ್ರಕರಣದ ಜೊತೆ ಥಳಕು ಹಾಕಿಕೊಂಡಿದ್ದು ಆಕಸ್ಮಿಕ. ಈ ಪ್ರಕರಣಕ್ಕೂ ಮುನ್ನವೇ ಇದೆಲ್ಲವೂ ಆರಂಭವಾಗಿತ್ತು.

ಈ ಹಿಂದೆಯೂ ಇತರ ಮುಖ್ಯನ್ಯಾಯಾಧೀಶರು ಕೂಡ ಇದೇ ರೀತಿಯಲ್ಲೇ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿದ್ದರು. ಆದರೆ, ಈಗ ಏಕಾಏಕಿ ಸಾರ್ವಜನಿಕವಾಗಿ ಹೇಳಿಕೆ ನೀಡುವ ಅವಶ್ಯಕತೆ ಉಂಟಾಗಿದ್ದು ಏಕೆ?
ನ್ಯಾ| ಲೋಯಾ ಪ್ರಕರಣವನ್ನು ಒಂದು ನಿರ್ದಿಷ್ಟ ಪೀಠಕ್ಕೆ ವಹಿಸಲಾಗಿತ್ತು. ಆದರೆ, ಯಾವುದೇ ಕಾರಣ ನೀಡದೇ ಆ ಪೀಠದಿಂದ ಹಿಂಪ ಡೆದುಕೊಳ್ಳಲಾಯಿತು. ಈ ಹಿಂದಿನ ಇತಿಹಾಸವನ್ನು ನೋಡಿದರೆ, ಒಂದೆರಡು ಬಾರಿ ಹೀಗೆ ಆಗಿರಬಹುದು. ಕೇವಲ ಇದೊಂದೇ ಕಾರಣ ವಲ್ಲ. ಇಂತಹ ಹಲವಾರು ಸಂಗತಿ  ಇದ್ದಿದ್ದರಿಂದ ನಾವು ಪತ್ರಿಕಾಗೋಷ್ಠಿ ಕರೆಯಬೇಕಾಯಿತು.

ಆದರೂ ನೀವು ಬಹಿರಂಗವಾಗಿ ಹೇಳಿಕೆ ನೀಡಬಹುದೇ?
ಇಲ್ಲ. ನನಗೆ ಆ ಅಧಿಕಾರವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಮತ್ತೆ ಇದೇ ಪ್ರಶ್ನೆ ಉದ್ಭವಿಸುತ್ತದೆ. ಆಗೇನು ಮಾಡುವುದು?

ನಿಮ್ಮ ಪ್ರಕಾರ ನ್ಯಾ| ರಂಜನ್ ಗೋಗೊಯ್ ಅವರು ಮುಂದಿನ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆಯೇ?
ಮುಂದಿನ ವರ್ಷ ಅಥವಾ ಇನ್ನು ೧೦ ವರ್ಷದಲ್ಲಿ ಏನಾಗಲಿದೆ ಎಂದು ನಾನು ಈಗ ಹೇಳಲಾರೆ. ಸಹಜವಾಗಿಯೇ ಈ ವಿಷಯವಾಗಿ ಒಂದಲ್ಲಾ ಒಂದು ದಿನ ಚರ್ಚೆ ಆಗಲಿದೆ. ಜನರು ಚರ್ಚೆ ಮಾಡದೇ ಇದ್ದರೆ ಸಮಸ್ಯೆ ಹಾಗೆಯೇ ಮುಂದುವರಿ ಯುತ್ತದೆ.
 

ನ್ಯಾಯಾಂಗ ವಿವಾದದಿಂದ ಸುಪ್ರೀಂಕೋರ್ಟ್‌ನ ಘನತೆಗೆ ಧಕ್ಕೆ ಆಗಿದೆಯೇ? ಈ ಬಗ್ಗೆ ನೀವೇನು ಹೇಳುತ್ತೀರಿ.
ನಾನು ಸುಪ್ರೀಂಕೋರ್ಟ್‌ನ ಒಳಗಡೆ ಕುಳಿತಿದ್ದೆ. ಹೀಗಾಗಿ ಹೊರಗಡೆ ಏನಾಯಿತು ಎಂದು ನನಗೆ ಗೊತ್ತಾಗಲಿಲ್ಲ. ಕೋರ್ಟ್‌ ಹೊರಗಿದ್ದ ನೀವೇ ಈ ಬಗ್ಗೆ ಅಭಿಪ್ರಾಯ ನೀಡಬೇಕು.
 

ಜನರು ಸುಪ್ರೀಂಕೋರ್ಟ್ ಒಳಗೆ ಎಲ್ಲವೂ ಸರಿ ಇಲ್ಲ ಅಂದುಕೊಂಡಿದ್ದಾರೆ. ಹಾಗಾಗಿ ಈ ಸಂಶಯ.

ದಿನ ಬರುತ್ತೆ, ಕಳೆದು ಹೋಗುತ್ತೆ. ನೀವು , ಆ ಸರ್ಕಾರ , ಈ ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಂದು ಸರ್ಕಾರದಲ್ಲಿ ಯಾವ ತಪ್ಪುಗಳಾಗುತ್ತಿದೆ ಎಂದು ಈಗ, ಆಗ, ಭವಿಷ್ಯದಲ್ಲಿಯೂ ಕೂಡ ವರದಿ ಮಾಡುತ್ತಲೇ ಇರುತ್ತೀರಿ. ಹಾಗಾಗಿ ಜನರಿಗೆ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ಕಾಲಕಾಲಕ್ಕೆ  ತಿಳಿಯುತ್ತಿರುತ್ತದೆ. ಆದರೂ ಅವರು ನೋಡುತ್ತಲೇ ಇರುತ್ತಾರೆ. ಲೋಕಸಭಾ ಚುನಾವಣೆಯಲ್ಲಿ 2 ಸೀಟುಗಳನ್ನಷ್ಟೇ ಪಡೆದ ಪಕ್ಷ ಮತ್ತೊಂದು ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬಹುದು. 30 ವರ್ಷಗಳ ಕಾಲ ದೇಶವನ್ನಾವಳಿದ ಪಕ್ಷ ಕಳೆದು ಹೋಗಬಹುದು. ಇವೆಲ್ಲಾ ಅಸ್ಥಿರವಾದುದು.

ನಿಮ್ಮ ಪ್ರಕಾರ ಸಾಂಸ್ಥಿಕ ಸುಧಾರಣೆ ಆಗಬೇಕಿದೆಯೇ?
ಸಾಂಸ್ಥಿಕವಾಗಿ ನ್ಯಾಯಾಂಗ ತನ್ನ ಮಹತ್ವವನ್ನು ಕಳೆದುಕೊಂಡಿದೆ ಎಂದು ಅನಿಸುತ್ತಿಲ್ಲ. ನೀವು ವ್ಯವಸ್ಥೆಯನ್ನು ಸ್ವಚ್ಛಗೊಳಿಸದೇ ಇದ್ದರೆ ನೀವು ವ್ಯವಸ್ಥೆಗೆ ಇನ್ನಷ್ಟು ಹಾನಿ ಮಾಡುತ್ತೀರಿ. ಕೆಲವೊಂದು ವಿಷಯ ಗಳನ್ನು ಯಾರಿಗೂ ಕಾಣದಂತೆ ಮುಚ್ಚಿ ಹಾಕಬಹುದು. ಆದರೆ, ಅದು ಶಾಶ್ವತ ಪರಿಹಾರ ಅಲ್ಲ. ಹೀಗಾಗಿ ನಾನು ಪ್ರತಿಭಟಿಸಬೇಕಾಗಿ ಬಂತು.

ನೀವು ಪತ್ರಿಕಾಗೋಷ್ಠಿ ಮಾಡಿದ್ದರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಏನಾದರೂ ಇದೆಯೇ?
ನ್ಯಾಯಾಂಗದಲ್ಲಿಯೇ ಪಾರದರ್ಶಕತೆ ಇಲ್ಲದೇ ಇದ್ದರೆ ಅದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಲ್ಲವೇ? ನ್ಯಾಯಾಲಯಗಳು ಸಾಂವಿಧಾನಿಕ ಹಿತವನ್ನು ಕಾಯುವುದಕ್ಕಾಗಿಯೇ ಸ್ಥಾಪಿಸಲ್ಪಟ್ಟಿವೆ. ಆದರೆ, ಅಲ್ಲೇ ಎಲ್ಲವೂ ಸರಿ ಇಲ್ಲದೇ ಇದ್ದರೆ ಸಂಸ್ಥೆಗಳು ಇದ್ದೂ ಪ್ರಯೋಜನವಿಲ್ಲ.

ಇಷ್ಟು ವರ್ಷಗಳ ಬಳಿಕ ನ್ಯಾಯಾಂಗದ ಪಾರದರ್ಶಕತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಹಾಗಿದ್ದರೆ ಮುಂದೇನು?
ನಾನು ಹೇಳುವುದಿಷ್ಟೇ. ಈ ವಿವಾದ ಇಲ್ಲಿಗೇ ಮುಗಿಯಬೇಕು. 30 ವರ್ಷಗಳ ಬಳಿಕ ಯಾವುದೇ ವ್ಯಕ್ತಿ ನ್ಯಾಯಾಂಗದ ನಂಬಿಕೆಯನ್ನು ಪ್ರಶ್ನೆ ಮಾಡಬಾರದು.
 

ಸರಿ ಹಾಗಿದ್ದರೆ, ಈ ಕುರಿತು ಚರ್ಚೆ ಆಗಬೇಕಿದೆಯೇ?
ನನ್ನ ಪ್ರಕಾರ ದೇಶದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಚರ್ಚೆಗಳು ಆಗುತ್ತಲೇ ಇವೆ. ಇದೊಂದು ಒಳ್ಳೆಯ  ಬೆಳವಣಿಗೆ. 

loader