ಪ್ರಾಣಿ ಹಿಂಸೆಯ ಕಾರಣಕ್ಕಾಗಿ ಜಲ್ಲಿಕಟ್ಟು ಕ್ರೀಡೆಯನ್ನು 2014ರಲ್ಲಿ ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಆದರೆ, ರಾಜಕೀಯ ಪಕ್ಷಗಳು ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸುತ್ತಾ ಬಂದಿವೆ.
ನವದೆಹಲಿ(ಜ. 12): ಜಲ್ಲಿಕಟ್ಟು ನಿಷೇಧ ಹಿಂಪಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಂಕ್ರಾಂತಿ ಹಬ್ಬದಂದು ನಡೆಯುವ ಜಲ್ಲಿಕಟ್ಟು ಎಂಬ ವಿಶೇಷ ಕ್ರೀಡೆಗೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಬೇಕೆಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಶನಿವಾರ ಹಬ್ಬವಿದ್ದು ಅಷ್ಟರೊಳಗೆ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂದು ತಮಿಳುನಾಡು ಮನವಿ ಮಾಡಿಕೊಂಡಿತ್ತು.
ಜಲ್ಲಿಕಟ್ಟು ನಿಷೇಧ ತೆರವಿಗಾಗಿ ನ್ಯಾಯಾಲಯಕ್ಕಷ್ಟೇ ಅಲ್ಲ ಕೇಂದ್ರ ಸರಕಾರಕ್ಕೂ ತಮಿಳುನಾಡು ಮೊರೆ ಹೋಗಿದೆ. ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟು ಕ್ರೀಡೆಎ ಮತ್ತೆ ಚಾಲನೆ ನೀಡಬೇಕೆಂದು ತಮಿಳುನಾಡ ಸರಕಾರ ಕೋರಿಕೆ ಮಾಡಿಕೊಂಡಿದೆ.
ಪ್ರಾಣಿ ಹಿಂಸೆಯ ಕಾರಣಕ್ಕಾಗಿ ಜಲ್ಲಿಕಟ್ಟು ಕ್ರೀಡೆಯನ್ನು 2014ರಲ್ಲಿ ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಆದರೆ, ರಾಜಕೀಯ ಪಕ್ಷಗಳು ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸುತ್ತಾ ಬಂದಿವೆ. ಕ್ರೀಡೆಯ ಪುನಾರಂಭಕ್ಕೆ ಎಲ್ಲಾ ಪಕ್ಷಗಳೂ ಒಗ್ಗೂಡಿವೆ.
ಏನಿದು ಜಲ್ಲಿಕಟ್ಟು?
ಇದು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ಬಲಿಷ್ಠ ಗೂಳಿಯನ್ನು ತಡೆದುನಿಲ್ಲಿಸುವುದು ಈ ಕ್ರೀಡೆಯ ಪ್ರಮುಖ ಭಾಗವಾಗಿದೆ. ಸ್ಪೇನ್'ನ ಗೂಳಿ ಆಟಕ್ಕೂ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೂ ಅಜಗಜಾಂತರ ವ್ಯತ್ಯಾಸವಿದೆ. ಸ್ಪೇನ್'ನ ಸಾಂಪ್ರದಾಯಿಕ ಆಟದಲ್ಲಿ ಗೂಳಿಯನ್ನು ಕೊಲ್ಲುವುದು ಮುಖ್ಯಗುರಿಯಾಗಿರುತ್ತದೆ. ಆದರೆ, ಜಲ್ಲಿಕಟ್ಟುವಿನಲ್ಲಿ ಗೂಳಿಯನ್ನು ತಡೆದು ನಿಲ್ಲಿಸುವುದು ಮುಖ್ಯ ಉದ್ದೇಶ.
