ನವದೆಹಲಿ(ಜೂ.25): ಸುಪ್ರೀಂಕೋರ್ಟ್’ನಲ್ಲಿ ಇಂದು ಕಾಂಗ್ರೆಸ್’ಗೆ ಹಿನ್ನೆಡೆಯಾಗಿದ್ದು, ರಾಜ್ಯಸಭೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.

ರಾಜ್ಯಸಭೆಯ ಎರಡು ಸ್ಥಾನಗಳಿಗೆ ಗುಜರಾತ್’ನಿಂದ ನಡೆಯಲಿರುವ ಚುನಾವಣೆಯನ್ನು, ಪ್ರತ್ಯೇಕವಾಗಿ ನಡೆಸುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಚುನಾವಣಾ ಆಯೋಗದ ಕರ್ತವ್ಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ.

ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ತೆರವಾದ ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಸಲು ಚುನಾವಣಾ ಆಯೋಗ ನರ್ಧಿರಿಸಿತ್ತು. 

ಆಯೋಗದ ಕ್ರಮವನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್‌ ಚಾವ್ಡಾ, ಆಯೋಗದ ಅಧಿಸೂಚನೆ ಅಸಾಂವಿಧಾನಿಕ ಎಂದು ದೂರಿದ್ದರು. 

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಂವಿಧಾನದ ಕಲಂ 32ರ ಅನ್ವಯ ಈ ವಿವಾದವನ್ನು ಚುನಾವಣಾ ಆಯೋಗದಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.