Asianet Suvarna News Asianet Suvarna News

ಕನ್ನಡಿಗರಿಗೆ ವೈದ್ಯ ಪಿಜಿ ಸೀಟು ನಷ್ಟ

ಕರ್ನಾಟಕದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯಲು ರಾಜ್ಯದಲ್ಲಿ 10 ವರ್ಷ ಅಧ್ಯಯನ ನಡೆಸಿರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

Supreme Court Red signal to Karnataka origin criterion for Govt seats

ನವದೆಹಲಿ : ಕರ್ನಾಟಕದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯಲು ರಾಜ್ಯದಲ್ಲಿ 10 ವರ್ಷ ಅಧ್ಯಯನ ನಡೆಸಿರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಗ್ಗೆ ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿ ಮಾಡಿ ಹೊಸದಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾ.ಅರುಣ್‌ ಮಿಶ್ರಾ ಮತ್ತು ನ್ಯಾ.ಯು.ಯು.ಲಲಿತ್‌ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ.

10 ವರ್ಷ ಕರ್ನಾಟಕದಲ್ಲಿ ಅಧ್ಯಯನ ಮಾಡಿದವರು ಹಾಗೂ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಅರ್ಹರು ಎಂದು ತಿಳಿಸಿ 2018ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪಿ.ಜಿ. ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಪ್ರಕ್ರಿಯೆಗೆ ಹೊರಡಿಸಲಾದ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಚ್‌ರ್‍ 10ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಕೃತಿ ಲಖಿಯಾ ಮತ್ತಿತರರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. 

2014ರಲ್ಲಿ ಇಂತಹದ್ದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು ಆ ತೀರ್ಪು ಈ ಪ್ರಕರಣಕ್ಕೂ ಅನ್ವಯಿಸುತ್ತದೆ. ಆದ್ದರಿಂದ ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆಯು ಅಸಿಂಧುವಾಗಿದೆ. ಕರ್ನಾಟಕದಲ್ಲಿನ ಕಾಲೇಜುಗಳಲ್ಲಿ ಎಂಬಿಬಿಎಸ್‌ ಅಥವಾ ಬಿಡಿಎಸ್‌ ಡಿಗ್ರಿ ಪಡೆದು ಸರ್ಕಾರಿ ಮೆಡಿಕಲ… ಕಾಲೇಜುಗಳಲ್ಲಿ ಅಥವಾ ಸರ್ಕಾರೇತರ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಪಿಜಿ ಸೀಟ್‌ ಪಡೆಯುವುದರಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಕರ್ನಾಟಕದಲ್ಲಿ ಎಂಬಿಬಿಎಸ್‌, ಬಿಡಿಎಸ್‌ ಪದವಿ ಪಡೆದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದ 44 ವೈದ್ಯರು ಈ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅಧಿಸೂಚನೆ ಅಸಾಂವಿಧಾನಿಕವಾಗಿರುವ ಕಾರಣ ಇದನ್ನು ರದ್ದುಗೊಳಿಸಬೇಕು ಎಂಬುದು ಅವರ ವಾದವಾಗಿತ್ತು.

ರಾಜ್ಯದಲ್ಲೇ ಸೇವೆ ಸಲ್ಲಿಸುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದ್ದು ಇಂತಹ ನಿಯಮ ರೂಪಿಸುವ ಅಧಿಕಾರವಿದೆ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ಆದರೆ ಮೆಡಿಕಲ… ಕೌನ್ಸಿಲ… ಆಫ್‌ ಇಂಡಿಯಾವು ದೂರುದಾರ ವಿದ್ಯಾರ್ಥಿಗಳ ವಾದವನ್ನು ಬೆಂಬಲಿಸಿತ್ತು.

Follow Us:
Download App:
  • android
  • ios