ನವದೆಹಲಿ(ಅ.18): ಕೇಂದ್ರ ಅಧ್ಯಯನ ತಂಡ ಸಲ್ಲಿಸಿರುವ ಅಧ್ಯಯನ ವರದಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ಸುಪ್ರೀಂಕೋರ್ಟ್, ಮುಂದಿನ ಆದೇಶದವರೆಗೂ ದಿನಕ್ಕೆ 2 ಸಾವಿರ ಕ್ಯೂಸೆಕ್​ ನೀರು ಹರಿಸುವಂತೆ ಸುಪ್ರೀಂಕೋರ್ಟ್, ರಾಜ್ಯಸರ್ಕಾರಕ್ಕೆ ಸೂಚಿಸಿದ್ದು, ವಿಚಾರಣೆಯನ್ನ ನಾಳೆಗೆ ಮುಂದೂಡಿದೆ.

2 ರಾಜ್ಯಗಳೂ ಶಾಂತಿ, ಸುಸ್ಯವಸ್ಥೆ ಕಾಪಾಡಬೇಕು, ನಾಗರಿಕರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಮಧ್ಯೆ, ಅಕ್ಟೋಬರ್​ 25ರ ನಂತರ ಈಶಾನ್ಯ ಮಳೆ ಮಾರುತ ಬರುತ್ತದೆ. ಈಗಾಗಲೇ ನಮಗೆ 11 ಟಿಎಂಸಿ ನೀರು ಖೋತಾ ಇದೆ. ಹೀಗಾಗಿ, ನೀರು ಬಿಡಲು ಆದೇಶಿಸಬೇಕೆಂದು ತಮಿಳುನಾಡು ವಕೀಲರು ವಾದ ಮಂಡಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯದ ಪರ ವಕೀಲ ಫಾಲಿ ನಾರಿಮನ್, ನಮ್ಮ ಬಳಿ ಕುಡಿಯುವುದಕ್ಕೂ ನೀರಿಲ್ಲ, ತಮಿಳುನಾಡಿಗೆ ಮತ್ತೊಂದು ಮಳೆ ಮಾರುತ ಇದೆ. ಆದರೆ, ಕರ್ನಾಟಕ್ಕೆ ಮತ್ತೆ ಮಳೆ ಬರುವುದಿಲ್ಲ. ಹೀಗಾಗಿ, ನೀರು ಬಿಡಲು ಆದೇಶಿಸಬೇಡಿ ಎಂದರು.