Asianet Suvarna News Asianet Suvarna News

‘ಅತೃಪ್ತರಿಗೆ ಸಿಕ್ಕಿದೆ ಹೊಸ ಬಲ’

ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದೆ. ಅತೃಪ್ತ ನಾಯಕರು ಇನ್ನೂ ದೂರ ಉಳಿದಿದ್ದು, ಇದೀಗ ಅವರಿಗೆ ಹೊಸ ಬಲ ಸಿಕ್ಕಿದೆ. 

Supreme Court Order Gives Strength To Rebel Leaders Says BS Yeddyurappa
Author
Bengaluru, First Published Jul 13, 2019, 7:30 AM IST

ಬೆಂಗಳೂರು ]ಜು.13] : ಶಾಸಕರ ರಾಜೀನಾಮೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಬಹಳ ಸಮಂಜಸವಾದ ಆದೇಶ ನೀಡಿದ್ದು, ಇದರಿಂದ ಮುಂಬೈನಲ್ಲಿರುವ ಶಾಸಕರಿಗೆ ಸಹ ನೈತಿಕ ಶಕ್ತಿ ಬಂದಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ಆದೇಶದಿಂದ ಸ್ಪೀಕರ್‌ ಅವರು 10 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ವಿಷಯದಲ್ಲಿ ಯಾವುದೇ ಕ್ರಮ ಜರುಗಿಸುವಂತಿಲ್ಲ ಎಂದರು.

ಶಾಸಕರ ರಾಜೀನಾಮೆ ವಿಚಾರದಲ್ಲಿ ಅನೇಕ ರೀತಿಯ ವಾದಗಳು ನಡೆದಿವೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಬಹಳ ಸಮಂಜಸವಾದ ಹಾಗೂ ಉತ್ತಮವಾದ ಆದೇಶವನ್ನು ನೀಡಿದೆ. ಇದರಿಂದ ಮುಂಬೈನಲ್ಲಿರುವ ಶಾಸಕರಿಗೆ ನೈತಿಕ ಶಕ್ತಿ ಬಂದಂತಾಗಿದೆ. ನ್ಯಾಯಾಲಯದ ಆದೇಶದ ಬಳಿಕ ನಮ್ಮ ಸ್ನೇಹಿತರನ್ನು ಮುಂಬೈಯಲ್ಲಿರುವ ಶಾಸಕರು ಸಂಪರ್ಕಿಸಿದ್ದರು. ನ್ಯಾಯಾಲಯದ ಆದೇಶವು ಎಲ್ಲರಿಗೂ ಸಮಾಧಾನ ತಂದಿದ್ದು, ಮಂಗಳವಾರ ನೀಡುವ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ವಿಶ್ವಾಸ ಮತಯಾಚನೆಗೆ ಮುಖ್ಯಮಂತ್ರಿಗಳು ಸ್ವಇಚ್ಛೆಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಇದನ್ನು ನಾವು ಪ್ರಶ್ನಿಸುವುದಿಲ್ಲ. ಅವರು (ಮುಖ್ಯಮಂತ್ರಿಗಳು) ಏನ್‌ ಮಾಡುತ್ತಾರೋ ನೋಡೋಣ. ನ್ಯಾಯಾಲಯದ ಕೆಲಸ ಸೇರಿದಂತೆ ಇತರೆ ಕೆಲಸಗಳಲ್ಲಿ ನಿರತನಾಗಿದ್ದ ಕಾರಣ ಸಲಹಾ ಸಮಿತಿ ಸಭೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಮ್ಮ ಶಾಸಕರ ಮೇಲೆ ವಿಶ್ವಾಸವಿದೆ. ನಮ್ಮೆಲ್ಲ ಶಾಸಕರು ಒಟ್ಟಾಗಿರಬೇಕೆಂದು ಒಂದೆಡೆ ಸೇರಿಸಿದ್ದೇವೆ ಎಂದರು.

ಜೆಡಿಎಸ್‌ ಜೊತೆ ಸರ್ಕಾರ ಸಾಧ್ಯವೇ ಇಲ್ಲ:  ಜೆಡಿಎಸ್‌ ಸಚಿವ ಸಾ.ರಾ.ಮಹೇಶ್‌ ಮತ್ತು ಬಿಜೆಪಿ ನಾಯಕರ ಗುರುವಾರ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಜೆಡಿಎಸ್‌ ಜತೆ ಸರ್ಕಾರ ರಚಿಸುವುದು ಸಾಧ್ಯವೇ ಇಲ್ಲ ಎಂದು ಖಚಿತವಾಗಿ ನುಡಿದರು.

ಈ ಹಿಂದೆ ಅವರೊಂದಿಗೆ (ಜೆಡಿಎಸ್‌) ಜತೆ ಸರ್ಕಾರ ಮಾಡಿ ಬಹಳ ಹಿಂಸೆ ಅನುಭವಿಸಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಜೊತೆ ಸರ್ಕಾರ ರಚಿಸುವುದಿಲ್ಲ. ಆಕಸ್ಮಿಕವಾಗಿ ನಡೆದಿರುವ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಈಶ್ವರಪ್ಪಗೆ ಬಿಎಸ್‌ವೈ ತರಾಟೆ

ಜೆಡಿಎಸ್‌ ಸಚಿವ ಸಾ.ರಾ.ಮಹೇಶ್‌ ಅವರನ್ನು ಭೇಟಿ ಮಾಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಮ್ಮ ಪಕ್ಷದ ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ರಾಜಕೀಯ ವಿಪ್ಲವಗಳ ಈ ಸನ್ನಿವೇಶದಲ್ಲಿ ಮಹೇಶ್‌ ಅವರನ್ನು ಭೇಟಿ ಮಾಡುವ ಅನಿವಾರ್ಯತೆ ಏನಿತ್ತು? ಅಲ್ಲದೆ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರನ್ನು ಕರೆದೊಯ್ಯುವ ಅಗತ್ಯವೇನಿತ್ತು. ಇದರಿಂದ ಅನಗತ್ಯವಾಗಿ ಗೊಂದಲ ಸೃಷ್ಟಿಯಾಗುತ್ತದೆ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಖಾರವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios