ಬಹಳ ದಿನಗಳಿಂದ ವಿವಾದಕ್ಕೆ ಗುರಿಯಾಗಿರುವ ಮುಸ್ಲಿಮರ ತ್ರಿವಳಿ ತಲಾಖೆ ಪದ್ಧತಿಯನ್ನು ಮಾನ್ಯ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸರ್ವೋಚ್ಚ ನ್ಯಾಯಾಲಯವು ತ್ರಿವಳಿ ತಲಾಖ್'ನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಕೋರ್ಟ್'ನ ಪಂಚಪೀಠದಲ್ಲಿ ತಲಾಖ್'ಗೆ ವಿರುದ್ಧವಾಗಿ ಬಹುಮತದ ತೀರ್ಪು ಬಂದಿದೆ.​

ನವದೆಹಲಿ(ಆ. 22): ಬಹಳ ದಿನಗಳಿಂದ ವಿವಾದಕ್ಕೆ ಗುರಿಯಾಗಿರುವ ಮುಸ್ಲಿಮರ ತ್ರಿವಳಿ ತಲಾಖೆ ಪದ್ಧತಿಯನ್ನು ಮಾನ್ಯ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸರ್ವೋಚ್ಚ ನ್ಯಾಯಾಲಯವು ತ್ರಿವಳಿ ತಲಾಖ್'ನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಕೋರ್ಟ್'ನ ಪಂಚಪೀಠದಲ್ಲಿ ತಲಾಖ್'ಗೆ ವಿರುದ್ಧವಾಗಿ ಬಹುಮತದ ತೀರ್ಪು ಬಂದಿದೆ.

ಭಾರತೀಯ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್, ನ್ಯಾ| ಕುರಿಯನ್ ಜೋಸೆಫ್, ನ್ಯಾ| ಫಾಲಿ ನಾರಿಮನ್, ನ್ಯಾ| ಲಲಿತ್ ಮತ್ತು ನ್ಯಾ| ಅಬ್ದುಲ್ ನಜೀರ್ ಅವರು ಈ ಪಂಚಪೀಠದ ನ್ಯಾಯಮೂರ್ತಿಗಳಾಗಿದ್ದಾರೆ. ನ್ಯಾ| ಕುರಿಯನ್ ಜೋಸೆಫ್, ನ್ಯಾ| ಫಾಲಿ ನಾರಿಮನ್, ನ್ಯಾ| ಉದಯ್ ಲಲಿತ್ ಅವರು ತ್ರಿವಳಿ ತಲಾಖ್ ಅಸಾಂವಿಧಾನಿಕವಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು, ನ್ಯಾ| ಅಬ್ದುಲ್ ನಜೀರ್ ಮತ್ತು ನ್ಯಾ| ಜೆಎಸ್ ಖೇಹರ್ ಅವರು ತ್ರಿವಳಿ ತಲಾಖ್ ರದ್ಧತಿಗೆ ವಿರುದ್ಧವಾಗಿ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ನ್ಯಾಯಮೂರ್ತಿಗಳು 6 ತಿಂಗಳ ಕಾಲ ತಲಾಖ್'ಗೆ ತಡೆಯಾಜ್ಞೆ ನೀಡಿ ಈ ಅವಧಿಯಷ್ಟರಲ್ಲಿ ಕೇಂದ್ರ ಸರಕಾರದಿಂದ ಕಾನೂನು ರಚನೆಯಾಗಲಿ ಎಂದು ಸಲಹೆ ನೀಡಿದ್ದರು. ಹಿಂದೂ ಕಾನೂನಿನಲ್ಲಿ ವರದಕ್ಷಿಣೆ ಕಾಯ್ದೆ ಮೊದಲಾದ ಕಾನೂನುಗಳು ರೂಪಿತಗೊಂಡಂತೆ ಮುಸ್ಲಿಂ ವೈಯಕ್ತಿಕ ಕಾನೂನು ವಿಚಾರದಲ್ಲೂ ಕಾನೂನು ರೂಪಿಸಬೇಕೆಂದು ನ್ಯಾ| ಖೇಹರ್ ಮತ್ತು ನ್ಯಾ| ಅಬ್ದುಲ್ ನಜೀರ್ ಹೇಳಿದ್ದಾರೆ. ಆದರೆ, ಉಳಿದ ಮೂವರು ನ್ಯಾಯಮೂರ್ತಿಗಳು ತಲಾಖ್'ಗೆ ವಿರುದ್ಧವಾಗಿ ತೀರ್ಪು ನೀಡಿರುವುದರಿಂದ ತ್ರಿವಳಿ ತಲಾಖ್'ಗೆ ಬ್ರೇಕ್ ಬೀಳುವುದು ಖಚಿತವಾಗಿದೆ.

ಖುರಾನ್'ನಲ್ಲಿ ಅನುಮತಿ ಇಲ್ಲದ ಆಚರಣೆಗೆ ಸಂವಿಧಾನದ ರಕ್ಷಣೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಇಸ್ಲಾಮಿಕ್ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್'ಗೆ ನಿಷೇಧ ಇರುವಾಗ ಸ್ವತಂತ್ರ ಭಾರತದಲ್ಲಿ ಇದು ಯಾಕೆ ಸಾಧ್ಯವಿಲ್ಲ? ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಈ ಅಂಶಗಳನ್ನು ಪ್ರಮುಖವಾಗಿ ಉಲ್ಲೇಖಿಸಿದೆ.