Asianet Suvarna News Asianet Suvarna News

ರಾಜ್ಯದ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್

ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್‌ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ ಗುಡ್ ನ್ಯೂಸ್ ನೀಡಿದೆ. 

Supreme Court Good News To Karnataka Farmers For Baane Land
Author
Bengaluru, First Published Sep 4, 2019, 10:07 AM IST

ರಾಕೇಶ್‌ ಎನ್‌.ಎಸ್‌.

ನವದೆಹಲಿ [ಸೆ.04]:  ಕೊಡಗು ಜಿಲ್ಲೆಯಲ್ಲಿ ವರ್ಗ ಭೂಮಿ ಹೊಂದಿರುವವರಿಗೆ ಲಭ್ಯವಾಗುವ ಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆ ಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ.

ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್‌ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ.

ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ ವರ್ಸಸ್‌ ಮಾಚಿಮಾಡ ಬೆಳ್ಳಿಯಪ್ಪ ಮತ್ತಿತರರು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಕದ ತಟ್ಟಿದ್ದರು. ನ್ಯಾಯಮೂರ್ತಿ ನವೀನ್‌ ಸಿನ್ಹಾ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು ಬಾಣೆ ಜಮೀನಿನ ಹಕ್ಕನ್ನು ಗುರುತಿಸಿ ಅದನ್ನು ಹಂಚಿಕೊಳ್ಳುವ ಅಧಿಕಾರವನ್ನು ಕಲ್ಪಿಸಿ ಆ.28ರಂದು ಆದೇಶ ನೀಡಿದೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆ- 1964ಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಪು ಎಂದು ವಿಶ್ಲೇಷಿಸಲಾಗಿದೆ.

ಬಳ್ಳಿ ಮಂಡೂರು ಗ್ರಾಮದಲ್ಲಿ ವರ್ಗ ಜಮೀನಿಗೆ ತಾಕಿಕೊಂಡಿದ್ದ ಬಾಣೆ ಜಾಗಕ್ಕೆ ಸಂಬಂಧಿಸಿ ತಕರಾರಿನ ಬಗ್ಗೆ ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್‌, ವರ್ಗ ಭೂಮಿ ಹೊಂದಿರುವವರಿಗೆ ಮಾತ್ರ ಅಲ್ಲಿನ ಬಾಣೆ ಜಮೀನಿನ ಮೇಲೆ ಅಧಿಕಾರವಿದೆ ಎಂಬ ಹೈಕೋರ್ಟ್‌ ಮತ್ತು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವುದರೊಂದಿಗೆ ಬಾಣೆ ಜಮೀನನ್ನು ಹಂಚುವ ಅಧಿಕಾರ ವರ್ಗ ಭೂಮಿಯ ಮಾಲೀಕನಿಗೆ ಸಿಕ್ಕಂತಾಗಿದೆ.

ಹೆಚ್ಚಿನ ಕರ್ನಾಟಕದ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಾಣೆ, ಕುಮ್ಕಿ, ಜಮ್ಮಾ ಮುಂತಾದವು ವರ್ಗ ಜಮೀನಿಗೆ ತಾಕಿಕೊಂಡಿದ್ದು ಈ ಜಮೀನಿನ ಮೇಲೆ ಸರ್ಕಾರಕ್ಕೆ ಅಧಿಕಾರವಿದೆ. ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗೆ ಪೂರಕವಾದ ಮತ್ತು ಮನೆ ಬಳಕೆಗೆ ಬೇಕಾದ ಸೊಪ್ಪು ಸಂಗ್ರಹ, ಕಟ್ಟಿಗೆ, ಮರಮಟ್ಟುಗಳನ್ನು ಮಾತ್ರ ಈ ಜಮೀನಿನಿಂದ ಪಡೆಯಬಹುದೇ ಹೊರತು ಅಲ್ಲಿ ಕೃಷಿ ಮಾಡುವಂತಿಲ್ಲ ಎಂದು ಭೂ ಕಂದಾಯ ಕಾಯ್ದೆ ಹೇಳಿದೆ. ಆದರೆ ಕೃಷಿಕರು ಬಾಣೆ ಅಥವಾ ಕುಮ್ಕಿ ಜಮೀನಿನ ಮೇಲೆ ತಮಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಬಾಣೆ ಭೂಮಿಯನ್ನು ಹಂಚುವ ಅಧಿಕಾರ ನೀಡಿರುವುದು ಬಾಣೆ ಜಮೀನಿನ ಮೇಲೆ ರೈತರ ಸೀಮಿತ ಅಧಿಕಾರವನ್ನು ನ್ಯಾಯಾಲಯ ಮಾನ್ಯ ಮಾಡಿದಂತೆ ಆಗಿದೆ ಎಂದು ಹೇಳಲಾಗುತ್ತಿದೆ.

ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟ್‌ನ ಈ ನಡೆ ಬಾಣೆ ಭೂಮಿಯನ್ನು ಆಸ್ತಿ ಹಕ್ಕಿನ ವ್ಯಾಪ್ತಿಯಲ್ಲಿ ಗುರುತಿಸಿದಂತಾಗಿದೆ. ಭೂ ಸ್ವಾಧೀನ ಕಾಯ್ದೆ ವರ್ಗ ಜಮೀನಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ವೇಳೆ ಬಾಣೆ ಅಥವಾ ಕುಮ್ಕಿ ಭೂಮಿಯು ಆಸ್ತಿ ಹಕ್ಕಿನ ಒಳಗೆ ಅಧಿಕೃತವಾಗಿ ಸೇರಿದರೆ ಭೂ ಸ್ವಾಧೀನ ಕಾಯ್ದೆ ಅನ್ವಯಿಸುವ ಸಂದರ್ಭದಲ್ಲಿ ಸರ್ಕಾರವು ಕಾಯ್ದೆಯನ್ವಯ ಪರಿಹಾರವನ್ನು ನೀಡಿಯೇ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ.

ಇದೇ ವೇಳೆ, ಬಾಣೆ ಜಮೀನಿನ ವಿವಾದಗಳು ಸಿವಿಲ್ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಬರುತ್ತದೆ ಎಂಬ ವಾದವನ್ನೂ ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ಬಾಣೆ ಭೂಮಿಗೆ ರಾಜ್ಯದ ಎಲ್ಲೆಲ್ಲಿ ಏನು ಹೇಳ್ತಾರೆ?

ಖಾಸಗಿ ಜಮೀನಿನ ಪಕ್ಕವಿರುವ ಜಮೀನಿಗೆ ಕರಾವಳಿ ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಕಾನ್‌, ಉತ್ತರ ಕನ್ನಡದಲ್ಲಿ ಬೆಟ್ಟ, ಹಾದಿ, ಮೈಸೂರಿನಲ್ಲಿ ಸೊಪ್ಪಿನ ಬೆಟ್ಟ, ಕಾನ್‌ ಜಮೀನು, ಕೊಡಗಿನಲ್ಲಿ ಜಮ್ಮಾ ಮತ್ತು ಬಾಣೆ ಮತ್ತು ಕಲಬುರಗಿಯಲ್ಲಿ ಮೊಟಸ್ಥಳ ಎಂದು ಕರೆಯುತ್ತಾರೆ. ವರ್ಗ ಭೂಮಿಗೆ ಸಿಗುವ ಈ ಜಮೀನಿನ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಇದೆಲ್ಲದರ ಸ್ವರೂಪ ಮತ್ತು ವ್ಯಾಖ್ಯಾನ ಒಂದೇ ಆಗಿದೆ. ಉದಾಹರಣೆಗೆ ಬಾಣೆ ಜಮೀನು ವರ್ಗ ಜಮೀನಿನ ಗರಿಷ್ಠ ಎರಡು ಪಟ್ಟು ಇದ್ದರೆ ಕುಮ್ಕಿಯು ವರ್ಗ ಜಮೀನಿನ ಸುತ್ತ 100 ಗಜದಷ್ಟುಇರುತ್ತದೆ.

Follow Us:
Download App:
  • android
  • ios