ರಾಜ್ಯದಲ್ಲಿನ ಕಬ್ಬಿಣದ ಗಣಿಗಾರಿಕೆಗೆ ವಿಧಿಸಲಾಗಿದ್ದ ಗರಿಷ್ಠ ಮಿತಿಯನ್ನು ಸಡಿಲಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಕಬ್ಬಿಣದ ಅದಿರು ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂಬ ಉಕ್ಕು ಕಂಪನಿಗಳ ಆತಂಕ ತಕ್ಕ ಮಟ್ಟಿಗೆ ದೂರವಾಗಿದೆ.

ಬೆಂಗಳೂರು (ಡಿ.15): ರಾಜ್ಯದಲ್ಲಿನ ಕಬ್ಬಿಣದ ಗಣಿಗಾರಿಕೆಗೆ ವಿಧಿಸಲಾಗಿದ್ದ ಗರಿಷ್ಠ ಮಿತಿಯನ್ನು ಸಡಿಲಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಕಬ್ಬಿಣದ ಅದಿರು ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂಬ ಉಕ್ಕು ಕಂಪನಿಗಳ ಆತಂಕ ತಕ್ಕ ಮಟ್ಟಿಗೆ ದೂರವಾಗಿದೆ. ಸುಪ್ರೀಂ ಕೋರ್ಟ್ 2012ರ ಏಪ್ರಿಲ್ 13ರಂದು ಹೊರಡಿಸಿದ್ದ ತೀರ್ಪುನಲ್ಲಿ ಬಳ್ಳಾರಿ ಜಿಲ್ಲೆಯಿಂದ ಗರಿಷ್ಠ 25 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ಹಾಗೂ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಂದ 5 ಎಂಎಂಟಿ ಅಂದರೆ ಕರ್ನಾಟಕದಿಂದ ಒಟ್ಟು ವಾರ್ಷಿಕ ಗರಿಷ್ಠ 30 ಎಂಎಂಟಿ ಅದಿರು ಉತ್ಪಾದನೆಗೆ ಅವಕಾಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಮಿತಿಯನ್ನು 35 ಎಂಎಂಟಿಗೆ ವಿಸ್ತರಿಸಿದೆ.

ಸುಪ್ರೀಂ ಕೋರ್ಟ್ನ ಗುರುವಾರದ ತೀರ್ಪಿನ ಅನ್ವಯ ಬಳ್ಳಾರಿಯಲ್ಲಿರುವ ಎ ಮತ್ತು ಬಿ ವರ್ಗೀಕರಣದಲ್ಲಿ ಬರುವ ಗಣಿ ಗುತ್ತಿಗೆಗಳು ಹೆಚ್ಚುವರಿಯಾಗಿ 3 ಎಂಎಂಟಿ ಅಂದರೆ ಒಟ್ಟು 28 ಎಂಎಂಟಿ ಹಾಗು ಬಳ್ಳಾರಿಯಲ್ಲಿನ ಎ ಮತ್ತು ಬಿ ವರ್ಗೀಕರಣದಲ್ಲಿನ ಗಣಿಗುತ್ತಿಗೆಗಳು ಹೆಚ್ಚುವರಿಯಾಗಿ 2 ಎಂಎಂಟಿ ಅಂದರೆ ಒಟ್ಟು 7 ಎಂಎಂಟಿ ಅದಿರು ಗಣಿಗಾರಿಕೆ ನಡೆಸಬಹುದಾಗಿದೆ.

ರಾಜ್ಯದಲ್ಲಿ ಅವ್ಯಾಹತವಾಗಿ, ಕಾನೂನಿನ ಅಂಕುಶವಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಮೂಲಕ ಎಸ್.ಆರ್. ಹಿರೇಮಠ್ ಸುಪ್ರೀಂಕೋರ್ಟ್ನಲ್ಲಿ 2009ರಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದಲ್ಲಿನ ಗಣಿಲೂಟಿಯ ವ್ಯಾಪಕತೆಯನ್ನು ಮನಗಂಡ ಸುಪ್ರೀಂ ಕೋರ್ಟ್ ವಾರ್ಷಿಕ ಗರಿಷ್ಠ ಮಿತಿ ವಿಧಿಸಿ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಗಣಿ ಕಂಪನಿಗಳು, ಉಕ್ಕು ಕಂಪನಿಗಳು ನಿರಂತರವಾಗಿ ಸುಪ್ರೀಂಕೋರ್ಟ್ ಕದ ಬಡಿಯುತ್ತ ಬಂದಿದ್ದವು. ಆದರೆ ಸುಪ್ರೀಂ ಕೋರ್ಟ್ ಈ ಬೇಡಿಕೆಯನ್ನು ತಳ್ಳಿ ಹಾಕುತ್ತಲೇ ಬಂದಿತ್ತು. ಆದರೆ ಇದೀಗ ಬದಲಾದ ಪರಿಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯವು ಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಲೀ ಮತ್ತು ಎಂಎಸ್ಪಿಎಲ್ (ಎ ಮತ್ತು ಬಿ ವರ್ಗೀಕರಣದಲ್ಲಿದ್ದ ಕಂಪನಿಗಳು ) ತಮಗೆ ನೀಡಲಾಗಿದ್ದ ಗರಿಷ್ಠ ಮಿತಿಯನ್ನು ಕಡಿಮೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಪರಿಗಣಿಸಿ ಗರಿಷ್ಠ ಮಿತಿಯನ್ನು ಸಡಿಲಗೊಳಿಸಲು ಒಪ್ಪಿಕೊಂಡಿದೆ.

ಸಿ ವರ್ಗೀಕರಣಕ್ಕೆ ಅನ್ವಯವಿಲ್ಲ: ಹೊಸ ಮಿತಿಯಾದ 35 ಎಂಎಂಟಿಯ ಬಾಧ್ಯತೆ ಎ ಮತ್ತು ಬಿ ವರ್ಗೀಕರಣಕ್ಕೆ ಮಾತ್ರ ಇರಲಿದೆ. ಸಿ ವರ್ಗೀಕರಣದ ಅದಿರನ್ನು ಈ ಗರಿಷ್ಠ ಮಿತಿಯಿಂದ ಹೊರಗಿರಿಸಲಾಗಿದೆ. ಸಿ ವರ್ಗೀಕರಣದಲ್ಲಿ ಒಟ್ಟು 7 ಗಣಿ ಗುತ್ತಿಗೆಗಳು ಮಾತ್ರ ಹರಾಜಾಗಿದ್ದು ಇವುಗಳಲ್ಲಿ 5 ಗಣಿ ಗುತ್ತಿಗೆಗಳನ್ನು ಜೆಎಸ್ಡಬ್ಲ್ಯು ಕೊಂಡು ಕೊಂಡಿದೆ. ಈ 5 ಗಣಿಗುತ್ತಿಗೆಗಳ ಗರಿಷ್ಠ ವಾರ್ಷಿಕ ಮಿತಿ 4.063 ಎಂಎಂಟಿ ಇದೆ. ಆದರೆಈ ಗಣಿ ಗುತ್ತಿಗೆಗಳು ಕೆಲಸ ಪ್ರಾರಂಭಿಸಲು ಇನ್ನೂ 18ರಿಂದ 21 ತಿಂಗಳು ಅಗತ್ಯವಿದ್ದು ಈ ಗುತ್ತಿಗೆಗಳ ಪುನಶ್ಚೇತನ ಮತ್ತು ಪುನರುಜ್ಜೀವನ ಯೋಜನೆಗಳನ್ನು ಪರಿಗಣಿಸಿ ಗಣಿ ಗುತ್ತಿಗೆಗಳ ಗರಿಷ್ಠ ಮಿತಿಯನ್ನು ನಿಗದಿಪಡಿಸಬಹುದು, ಈ ಸಂದರ್ಭದಲ್ಲಿ ಜಿಲ್ಲೆಗಳಿಗೆ ಈಗಾಗಲೇ ನೀಡಲಾಗಿರುವ ಗರಿಷ್ಠ ಮಿತಿಯಿಂದ ಇವುಗಳನ್ನು ಹೊರಗಿಡಬಹುದು ಎಂಬ ಸಿಇಸಿಯ ಶಿಫಾರಸನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ರಾಜ್ಯದಲ್ಲಿ ಗಣಿಗಾರಿಕೆಗೆ ಇನ್ನಷ್ಟು ಶಕ್ತಿ ನೀಡಲಿದೆ. ಗಣಿ ಅಕ್ರಮ ಎಸಗದ ಅಥವಾ ಅಲ್ಪ ಪ್ರಮಾಣದಲ್ಲಿ ಗಣಿ ಅಕ್ರಮ ಕೈಗೊಂಡಿದ್ದ 18 ಎ ವರ್ಗೀಕರಣ ಮತ್ತು 63 ಬಿ ವರ್ಗೀಕರಣದ ಗಣಿ ಗುತ್ತಿಗೆಗಳಿಗೆ ನಿಯಂತ್ರಣಕ್ಕೆ ಒಳಪಟ್ಟು ಗಣಿಗಾರಿಕೆಗೆ ಅವಕಾಶ ನೀಡಿತ್ತು.

ರಾಕೇಶ್ ಎನ್.ಎನ್