ಕೋಹಿನೂರ್ ವಜ್ರವನ್ನು ಬ್ರಿಟಿಷ್ ಸರ್ಕಾರ ಒತ್ತಾಯಪೂರ್ವಕವಾಗಲಿ ಇಲ್ಲವೇ ಕದ್ದುಕೊಂಡು ಹೋಗಿಲ್ಲ. ಬದಲಾಗಿ ಸಿಖ್ ರಾಜಮನೆತನದವರು ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಏಪ್ರಿಲ್ 2016ರಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್'ಗೆ ತಿಳಿಸಿತ್ತು.

ನವದೆಹಲಿ(ಏ.21): ಬ್ರಿಟನ್‌'ನಲ್ಲಿರುವ ಭಾರತದ ಕೊಹಿನೂರ್ ವಜ್ರವನ್ನು ಮರಳಿ ಪಡೆಯುವ ಬಗ್ಗೆ ಮತ್ತು ಅದನ್ನು ಹರಾಜು ಹಾಕದಂತೆ ತಡೆಯುವ ಕುರಿತು ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕೊಹಿನೂರ್ ವಜ್ರವನ್ನು ಭಾರತಕ್ಕೆ ವಾಪಸ್ ತರುವ ಕುರಿತಂತೆ ಎನ್‌'ಜಿಒವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರಿದ್ದ ಪೀಠ, ಆಸ್ತಿಯೊಂದನ್ನು ಹರಾಜು ಹಾಕದಂತೆ ವಿದೇಶಿ ಸರ್ಕಾರಕ್ಕೆ ಕೇಳುವ ಅಧಿಕಾರ ಕೋರ್ಟ್‌'ಗೆ ಇಲ್ಲ ಎಂದು ತಿಳಿಸಿದೆ.

ಇದೇ ವೇಳೆ ಕೊಹಿನೂರ್ ವಜ್ರವನ್ನು ತರುವ ವಿಚಾರವಾಗಿ ಭಾರತ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರವನ್ನು ಕೋರ್ಟ್ ಉಲ್ಲೇಖಿಸಿದೆ.

ಕೊಹಿನೂರ್ ವಜ್ರವನ್ನು ಬ್ರಿಟಿಷರು ತಾವು ಭಾರತದಲ್ಲಿ ಆಡಳಿತ ಮುಗಿಸಿದ ಬಳಿಕ ಬ್ರಿಟನ್‌'ಗೆ ತೆಗೆದುಕೊಂಡು ಹೋಗಿದ್ದರು.

ಜುಲೈ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಮಿತಿಯೊಂದು ನೇಮಿಸಿ ಕೋಹಿನೂರ್ ವಜ್ರವನ್ನು ವಾಪಾಸ್ ತರಿಸುವ ಕುರಿತು ಮಾತುಕತೆ ನಡೆಸಿದ್ದರು.