ಹಿರಿಯ ವಕೀಲರಾದ ಫಾಲಿ ಎಸ್.ನಾರಿಮನ್ ಮತ್ತು ಹರೀಶ್ ಸಾಳ್ವೆ, ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸುವುದರ ಮೇಲೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು
ನವದೆಹಲಿ(ಅ.06): ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ವಾಕ್ ಸ್ವಾತಂತ್ರ್ಯ ಎಂಬ ವಾದಕ್ಕೆ ಪೆಟ್ಟು ನೀಡುವಂಥ ನಿಲುವೊಂದನ್ನು ಸುಪ್ರೀಂಕೋರ್ಟ್ ಗುರುವಾರ ವ್ಯಕ್ತಪಡಿಸಿದೆ.
ಇತ್ತೀಚೆಗೆ ವಕೀಲರೊಬ್ಬರು ಸುದ್ದಿವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ವೇಳೆ ಸುಪ್ರೀಂಕೋರ್ಟ್'ನಲ್ಲಿ ಕೆಲ ನ್ಯಾಯಾಧೀಶರು ಸರ್ಕಾರದ ಪರವಾಗಿದ್ದಾರೆ ಎಂಬರ್ಥದಲ್ಲಿ ಮಾತುಗಳನ್ನು ಆಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ, ಟೀಕೆಗೆ ಗುರಿಯಾಗಿತ್ತು. ಈ ವಿಷಯವನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ನಾವು ಸರ್ಕಾರವನ್ನು ಹೇಗೆ ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿಯಲು, ವೃಥಾ ಆರೋಪ ಮಾಡುವವರು ಸುಪ್ರೀಂಕೋರ್ಟ್ಗೆ ಆಗಮಿಸಿ ತಿಳಿಯಬೇಕು ಎಂದು ಕಿಡಿಕಾರಿದರು.
ಈ ವೇಳೆ ಮಧ್ಯಪ್ರವೇಶಿಸಿದ ಹಿರಿಯ ವಕೀಲರಾದ ಫಾಲಿ ಎಸ್.ನಾರಿಮನ್ ಮತ್ತು ಹರೀಶ್ ಸಾಳ್ವೆ, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸುವುದರ ಮೇಲೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು. ಈ ಸಲಹೆಗೆ ನ್ಯಾಯಪೀಠ ಸಹಮತ ವ್ಯಕ್ತಪಡಿಸಿತು.
