ಬೆಂಗಳೂರು(ಸೆ.20): ಕಾವೇರಿ ನದಿ ನೀರು ಹಂಚಿಕೆ ವಿವಾದದ ಅರ್ಜಿ ಇವತ್ತು ಸುಪ್ರೀಂ ಕೋರ್ಟ್'ನಲ್ಲಿ ವಿಚಾರಣೆಗೆ ಬರಲಿದೆ. ಹಾಗಾದರೆ, ಕರ್ನಾಟಕಕ್ಕೆ ಇವತ್ತು ನ್ಯಾಯ ಸಿಗುತ್ತಾ? ಮೇಲುಸ್ತುವಾರಿ ಸಮಿತಿ ತೀರ್ಪನ್ನು ಸುಪ್ರೀಂ ಕೋರ್ಟ್'ನಲ್ಲಿ ಪ್ರಶ್ನಿಸಿದರೆ, ಏನೇನಾಗಬಹುದು? ತಮಿಳುನಾಡು ಸರ್ಕಾರಕ್ಕೆ ಇರುವ ಲಾಭವೇನು? ಇಲ್ಲಿದೆ ಸಂಪೂರ್ಣ ವಿವರ
ಇವತ್ತು ಸುಪ್ರೀಂ ಕೋರ್ಟ್'ನಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿವಾದದ ಅರ್ಜಿ ವಿಚಾರಣೆಗೆ ಬರಲಿದೆ. ಆದ್ರೆ, ಇವತ್ತು ನಡೆಯಲಿರುವ ವಾದ ಪ್ರತಿವಾದಗಳ ಅಂಶಗಳನ್ನ ಗಮನಿಸಿದರೆ ಬಹುತೇಕ ಕರ್ನಾಟಕಕ್ಕೆ ವಿರುದ್ಧವಾಗಿಯೆ ಇದೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಿನ್ನೆ ಮೇಲುಸ್ತುವಾರಿ ಸಮಿತಿ ನೀಡಿದ ಆದೇಶವನ್ನು ತಮಿಳುನಾಡು ತನಗೆ ಸಮಾಧಾನ ತಂದಿಲ್ಲ ಎಂದು ವಾದಿಸಬಹುದು. ಹೆಚ್ಚುವರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್'ನಲ್ಲಿ ತಮಿಳುನಾಡು ಹೊಸ ಅರ್ಜಿ ಸಲ್ಲಿಸಬಹುದು. ಮೇಲುಸ್ತುವಾರಿ ಸಮಿತಿಯ ಸಂಕಷ್ಟ ಸೂತ್ರದ ಪ್ರಕಾರವೇ ಹೇಳುವುದಾದರೆ ಇನ್ನೂ 18ರಿಂದ 20 ಟಿಎಂಸಿ ನೀರು ಖೋತಾ ಇದೆ ಅದನ್ನು ಕೊಡಿಸಿ ಅಂತಾ ಲಿಖಿತ ದಾಖಲೆ ಸಲ್ಲಿಸಬಹುದು. ಇದಕ್ಕಾಗಿ ಇವತ್ತು ಮತ್ತು ಅಕ್ಟೋಬರ್'ನಲ್ಲಿ ಮತ್ತೆ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯಬಹುದು..
ಇದು ತಮಿಳುನಾಡಿಗೆ ಕಾನೂನು ಹೋರಾಟದಲ್ಲಿ ಮುಂದಿರುವ ಸಾಧ್ಯಾಸಾಧ್ಯತೆಗಳಾದರೆ, ಕರ್ನಾಟಕಕ್ಕೆ ಹಿನ್ನಡೆಯಾಗುವ ಸೂಚನೆಯೇ ಹೆಚ್ಚು, ಯಾಕೆಂದರೆ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ತೀರ್ಪನ್ನು ಕರ್ನಾಟಕ ಮೌಖಿಕವಾಗಿಯೇನೋ ವಿರೋಧಿಸಬಹುದು. ಆದರೆ, ಲಿಖಿತ ಅರ್ಜಿ ಸಲ್ಲಿಸುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಯಾಕಂದ್ರೆ, ಒಂದು ವೇಳೆ ಲಿಖಿತ ಅರ್ಜಿ ಸಲ್ಲಿಸಿದರೆ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಕರ್ನಾಟಕ ಪರ ವಕೀಲರ ವಾದ. ಸುಪ್ರೀಂ ಕೋರ್ಟ್'ಗೆ ಮೇಲುಸ್ತುವಾರಿ ಸಮಿತಿ ತಮಿಳುನಾಡಿಗೆ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಖೋತಾ ಇರುವ ನೀರಿನ ವಿಚಾರವನ್ನ ಪ್ರಸ್ತಾಪಿಸಿದ್ರೆ ಕರ್ನಾಟಕಕ್ಕೇ ಕಷ್ಟ. ಒಂದು ವೇಳೆ ಮೇಲುಸ್ತುವಾರಿ ಸಮಿತಿ ಲಿಖಿತ ದಾಖಲೆ ಸಲ್ಲಿಸಿದರೆ ಕರ್ನಾಟಕ ಇನ್ನಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕುತ್ತದೆ.
ಈ ಎಲ್ಲಾ ಸಂಕಷ್ಟಗಳನ್ನು ಅರಿತಿರುವ ರಾಜ್ಯ ಸರ್ಕಾರ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಉನ್ನತಮಟ್ಟದ ಸಭೆ ನಡೆಸಿದರು. ಈ ಬಗ್ಗೆ ಕ್ಯಾಬಿನೆಟ್'ನಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಆದರೆ, ಎಲ್ಲರ ಕಣ್ಣು ಈಗ ಸುಪ್ರೀಂ ಕೋರ್ಟ್ ತೀರ್ಪಿನತ್ತ ನೆಟ್ಟಿದೆ.
